Supreme Court, Namaz

 
ಸುದ್ದಿಗಳು

ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ, ಮತೀಯ ಅಪರಾಧ: ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಗೆ ಕೋರಿ ಸುಪ್ರೀಂಗೆ ಮನವಿ

ದೇಶದಲ್ಲಿ ನಡೆದಿರುವ ಎಲ್ಲಾ ದ್ವೇಷ ಅಪರಾಧಗಳನ್ನು ಸಂಕಲಿಸಲು ಸ್ವತಂತ್ರ ಸಮಿತಿ ರಚಿಸುವಂತೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

Bar & Bench

ದೇಶದಲ್ಲಿ ನಡೆದಿರುವ ಎಲ್ಲಾ ರೀತಿಯ ದ್ವೇಷಾಪರಾಧ ಮತ್ತು ದ್ವೇಷ ಭಾಷಣ ಅದರಲ್ಲೂ ವಿಶೇಷವಾಗಿ ಪ್ರವಾದಿ ಮೊಹಮ್ಮದ್‌ ಅವರನ್ನು ಗುರಿಯಾಗಿಸಿ ನಡೆಸಿರುವ ದಾಳಿಗಳ ಕುರಿತು ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ದೇಶದಲ್ಲಿ ಇಸ್ಲಾಂ ಮತ್ತು ಮುಸ್ಲಿಮರನ್ನು ಗುರಿಯಾಗಿಸಿ ನಡೆಸಲಾಗಿರುವ ವಿವಿಧ ದ್ವೇಷ ಭಾಷಣಗಳನ್ನು ಉಲ್ಲೇಖಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸಂಸ್ಥೆಗಳು ಅಂಥವರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜಾಮಿಯಾತ್ ಉಲಮಾ ಇ ಹಿಂದ್‌ ಮತ್ತು ಇಸ್ಲಾಂ ವಿದ್ವಾಂಸ ಮೌಲಾನಾ ಸೈಯದ್‌ ಮಹಮೂದ್ ಅಸಾದ್‌ ಮದನಿ ಅವರು ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

“ಇಡೀ ಆಡಳಿತ ವ್ಯವಸ್ಥೆ ಮತ್ತು ಪೊಲೀಸರು ನಿರ್ದಿಷ್ಟ ಪ್ರಕರಣಗಳ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ. ಕೆಲವು ಪ್ರಕರಣಗಳಲ್ಲಿ ನಾಮ್‌ಕೆವಾಸ್ತೆ ರೀತಿಯಲ್ಲಿ ನಡೆದುಕೊಂಡಿದ್ದಾರೆ… ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಹಲವು ಸಂತ್ರಸ್ತರು ನೀಡಿದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲು ಪೊಲೀಸರು ವಿಫಲರಾಗಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಗುರುಗ್ರಾಮದ ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕವಾಗಿ ನಮಾಜ್‌ ಮಾಡುವುದಕ್ಕೆ ಬಲಪಂಥೀಯ ಗುಂಪುಗಳು ವಿರೋಧ ವ್ಯಕ್ತಪಡಿಸಿದ ಘಟನೆ ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಲಾಗಿದೆ. “ನಿರ್ದಿಷ್ಟ ಸ್ಥಳದಿಂದ ಮುಸ್ಲಿಮರನ್ನು ಓಡಿಸಿದ್ದಲ್ಲದೇ ಅವರ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲಾಗಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ. ನಮಾಜ್‌ ಮಾಡುವ ಸ್ಥಳದಲ್ಲಿ ಸೆಗಣಿ ಹರಡುವ ಮೂಲಕ ಪ್ರತಿಭಟನಾಕಾರರು ಅದನ್ನು ವಶಕ್ಕೆ ಪಡೆದಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇಸ್ಲಾಂನಲ್ಲಿ ನಮಾಜ್‌ ಮಾಡುವುದು ಕಡ್ಡಾಯ ಧಾರ್ಮಿಕ ನಂಬಿಕೆಯಾಗಿದ್ದು, ಇದನ್ನು ಉಲ್ಲಂಘಿಸುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ತಕರಾರು ತೆಗೆಯಲಾಗಿದೆ.

ಪ್ರವಾದಿ ಮೊಹಮ್ಮದ್‌ ಅವರನ್ನು ನಿಂದಿಸುವ ಮೂಲಕ ಆರಂಭವಾದ ತ್ರಿಪುರದಲ್ಲಿನ ಹಿಂಸಾಚಾರ, ಈಚೆಗೆ ಮುಸ್ಲಿಮರ ಮಾರಣಹೋಮಕ್ಕೆ ಕರೆ ನೀಡಿದ್ದ ಯತಿ ನರಸಿಂಗಾನಂದ ಸರಸ್ವತಿ, ಜಂತರ್‌ ಮಂತರ್‌ನಲ್ಲಿ ದ್ವೇಷ ಭಾಷಣ ಮಾಡಿದ್ದ ಸೂರಜ್‌ ಪಾಲ್‌ ಅಮು, ಕರ್ನಾಟಕದ ಗೋಣಿಕೊಪ್ಪಲಿನಲ್ಲಿ ಸಂತೋಷ್‌ ತಮ್ಮಯ್ಯ ಎಂಬಾತ ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಮಾಡಿದ್ದ ಭಾಷಣ, ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಸಂಬಂಧಿ ನವೀನ್‌ ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್‌ ಅವರ ವಿರುದ್ಧ ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್‌ ಅನ್ನು ಅರ್ಜಿದಾರರು ಉಲ್ಲೇಖಿಸಿದ್ದು, ಇದರಿಂದ ಗಲಭೆ, ದೊಂಬಿ ಹತ್ಯೆಗಳು ನಡೆದಿವೆ ಎಂದು ವಿವರಿಸಿದ್ದಾರೆ. ಹೀಗಾಗಿ, ದೇಶದಲ್ಲಿ ನಡೆದಿರುವ ದ್ವೇಷ ಅಪರಾಧಗಳನ್ನು ದಾಖಲೀಕರಿಸಲು ಸ್ವತಂತ್ರ ಸಮಿತಿಯನ್ನು ನೇಮಿಸುವಂತೆ ಹಾಗೂ ಅದರ ತನಿಖೆಯನ್ನು ಹೇಗೆ ನಡೆಸಬೇಕು ಎಂದು ನಿರ್ದಿಷ್ಟ ಸೂಚನೆಗಳನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.