CJI NV Ramana 
ಸುದ್ದಿಗಳು

ಹಿಂದೂ, ಬೌದ್ಧ, ಇಸ್ಲಾಂ ಧರ್ಮಗಳ ಸಂಗಮ ಜಮ್ಮು ಮತ್ತು ಕಾಶ್ಮೀರ ಎಂದ ಸಿಜೆಐ ರಮಣ: ಬಹುತ್ವ ಉಳಿಸಿಕೊಳ್ಳಲು ಕರೆ

ಶ್ರೀನಗರದಲ್ಲಿ ನಿರ್ಮಾಣವಾಗಲಿರುವ ಹೈಕೋರ್ಟ್ ನೂತನ ಕಟ್ಟಡಕ್ಕೆ ಶಂಕಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Bar & Bench

ಜಮ್ಮು ಮತ್ತು ಕಾಶ್ಮೀರ ಹಿಂದೂ, ಬೌದ್ಧ, ಇಸ್ಲಾಂ ಧರ್ಮಗಳ ಸಂಗಮವಾಗಿದ್ದು ಅದರ ಬಹುತ್ವವನ್ನು ಕಾಪಾಡಿಕೊಳ್ಳಬೇಕಿದ ಎಂದು ಕವಿ ರಾಜಾ ಬಸು ಅವರನ್ನು ಪ್ರಸ್ತಾಪಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಕರೆ ನೀಡಿದರು.

ಶ್ರೀನಗರದಲ್ಲಿ ನಿರ್ಮಾಣವಾಗಲಿರುವ ಹೈಕೋರ್ಟ್‌ ನೂತನ ಕಟ್ಟಡಕ್ಕೆ ಶನಿವಾರ ಶಂಕಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

" ಕಾಶ್ಮೀರದ ಅಭಿಮಾನಿಯಾದ ಕವಿ ರಾಜಾ ಬಸು ಹೇಳಿದಂತೆ ಜಮ್ಮು ಮತ್ತು ಕಾಶ್ಮೀರವು ಹಿಂದೂ, ಬೌದ್ಧ ಮತ್ತು ಇಸ್ಲಾಂ ಹೀಗೆ ಮೂರು ಮಹಾನ್ ಧರ್ಮಗಳ ಸಂಗಮವಾಗಿದೆ. ನಮ್ಮ ಬಹುತ್ವದ ಹೃದಯಭಾಗವಾಗಿರುವ ಈ ಸಂಗಮವನ್ನು ನಿರಂತರವಾಗಿ ಕಾಯ್ದುಕೊಳ್ಳುವ ಅಗತ್ಯವಿದೆ" ಎಂದು ಸಿಜೆಐ ಹೇಳಿದರು.

ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಜಿಲ್ಲಾ ನ್ಯಾಯಾಂಗದ ಪ್ರಾಮುಖ್ಯತೆಯನ್ನು ವಿವರಿಸಿದ ಸಿಜೆಐ ವ್ಯಾಜ್ಯ ಪರಿಹಾರಕ್ಕೆ ಪರ್ಯಾಯ ವಿಧಾನಗಳನ್ನು ಆಯ್ಕೆ ಮಾಡಲು ಜಿಲ್ಲಾ ನ್ಯಾಯಾಧೀಶರನ್ನು ಒತ್ತಾಯಿಸಿದರು.

"ಜಿಲ್ಲಾ ನ್ಯಾಯಾಂಗಗಳು ಇದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ವಿಶೇಷವಾಗಿ ಒತ್ತಾಯಿಸುತ್ತೇನೆ. ನೀವು ತಳಮಟ್ಟದಲ್ಲಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಅರಸುವವರ ಜೊತೆ ಮೊದಲ ಸಂಪರ್ಕದಲ್ಲಿರುತ್ತೀರಿ. ನಿಮಗೆ ಜನರೊಂದಿಗೆ ನೇರ ಸಂಪರ್ಕ ಇರುತ್ತದೆ. ನೀವು ಪಕ್ಷಕಾರರ ಮನವೊಲಿಸಬೇಕು. ಸಾಧ್ಯವಾದಾಗಲೆಲ್ಲಾ ಎಡಿಆರ್ (ಪರ್ಯಾಯ ವ್ಯಾಜ್ಯ ಪರಿಹಾರ) ಕಾರ್ಯವಿಧಾನಗಳನ್ನು ಆಯ್ಕೆ ಮಾಡಿ. ಇದು ಪಕ್ಷಕಾರರಿಗೆ ಸಹಾಯ ಮಾಡುವುದಲ್ಲದೆ, ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, "ಎಂದು ಅವರು ಹೇಳಿದರು.

ಆರೋಗ್ಯಕರ ಪ್ರಜಾಪ್ರಭುತ್ವ ಕೆಲಸ ಮಾಡಲು ಜನ ತಮ್ಮ ಹಕ್ಕು, ಘನತೆಗೆ ರಕ್ಷಣೆ ಇದೆ ಮತ್ತು ಅದಕ್ಕೊಂದು ಗೌರವವಿದೆ ಎಂದು ಭಾವಿಸುವುದು ಕಡ್ಡಾಯವಾಗಿದೆ ಎಂದು ಸಿಜೆಐ ಒತ್ತಿ ಹೇಳಿದರು. ವಿವಾದಗಳ ತ್ವರಿತ ತೀರ್ಪು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ನ್ಯಾಯದ ನಿರಾಕರಣೆ ಅಂತಿಮವಾಗಿ ಅರಾಜಕತೆಗೆ ಕಾರಣವಾಗುತ್ತದೆ. ಜನ ಕಾನೂನುಬಾಹಿರ ತಂತ್ರಗಳನ್ನು ಹುಡುಕುವುದರಿಂದ ಆ ಕೂಡಲೇ ನ್ಯಾಯಾಂಗ ಎಂಬ ಸಂಸ್ಥೆ ಅಸ್ಥಿರಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

“ನ್ಯಾಯಾಲಯಗಳ ಒಳಗೊಳ್ಳುವಿಕೆ ಮತ್ತು ನ್ಯಾಯ ವಿತರಣೆಯಲ್ಲಿ ದೇಶ ತುಂಬಾ ಹಿಂದುಳಿದಿದೆ. ಇದನ್ನು ತುರ್ತಾಗಿ ಪರಿಗಣಿಸದಿದ್ದರೆ, ನ್ಯಾಯ ದೊರಕಿಸಿಕೊಡುವ ಸಾಂವಿಧಾನಿಕ ಆದರ್ಶ ಸೋಲುತ್ತದೆ. ದೇಶದಾದ್ಯಂತ ನ್ಯಾಯಾಂಗ ಮೂಲಸೌಕರ್ಯದ ಸ್ಥಿತಿಯು ತೃಪ್ತಿಕರವಾಗಿಲ್ಲ. ನ್ಯಾಯಾಲಯಗಳು ಬಾಡಿಗೆ ಕಟ್ಟಡಗಳು ಮತ್ತು ಶೋಚನೀಯ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ” ಎಂದು ಅವರು ತಿಳಿಸಿದರು.

ಜಮ್ಮು ಕಾಶ್ಮೀರದ ವಿಚಾರಕ್ಕೆ ಬಂದರೆ ಪ್ರಸ್ತುತ ಕೇಂದ್ರ ಸರ್ಕಾರವೇ ಶೇ 100ರಷ್ಟು ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು ಕಂದರ ತುಂಬಲು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.