High Court of Jammu & Kashmir, Srinagar  
ಸುದ್ದಿಗಳು

ಮುಂಜಾಗ್ರತಾ ಕ್ರಮವಾಗಿ ಬಂಧನ: ಕಾಶ್ಮೀರದ ಇಬ್ಬರು ಮೌಲ್ವಿಗಳ ವಿರುದ್ಧದ ಆದೇಶ ರದ್ದುಗೊಳಿಸಿದ ಕಾಶ್ಮೀರ ಹೈಕೋರ್ಟ್

Bar & Bench

ಮುನ್ನೆಚ್ಚರಿಕಾ ಕ್ರಮವಾಗಿ ಕಾಶ್ಮೀರದ ಇಬ್ಬರು ಮೌಲ್ವಿಗಳ ವಿರುದ್ಧ ಹೊರಡಿಸಲಾಗಿದ್ದ ಬಂಧನ ಆದೇಶವನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ [ಮುಷ್ತಾಕ್ ಅಹ್ಮದ್ ಭಟ್ ಅಲಿಯಾಸ್‌ ವೀರಿ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ; ಮೊಲ್ವಿ ಅಬ್ದುಲ್‌ ರಶೀದ್ ಶೇಖ್ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಈ ನಿಟ್ಟಿನಲ್ಲಿ ಎರಡು ಪ್ರತ್ಯೇಕ ಆದೇಶಗಳನ್ನು ಪ್ರಕಟಿಸಲಾಗಿದೆ. ನ್ಯಾಯಮೂರ್ತಿ ರಜನೀಶ್ ಓಸ್ವಾಲ್ ಅವರು ವೀರಿ ಅವರ ಬಿಡುಗಡೆಗೆ ಆದೇಶಿಸಿದರೆ, ನ್ಯಾ. ಸಂಜಯ್ ಧರ್ ಅವರು ದಾವೂದಿ ಅವರ ಬಿಡುಗಡೆಗೆ ಆದೇಶ ನೀಡಿದರು.

ಅನಂತನಾಗ್‌ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದಂತೆ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಈ ಇಬ್ಬರೂ ಧರ್ಮಗುರುಗಳನ್ನು 2022ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

ವೀರಿ ಅವರ ಪ್ರಕರಣದಲ್ಲಿ ಅದರಲ್ಲಿಯೂ ಆತ ದೇಶ ವಿರೋಧಿ ಭಾಷಣ ಮಾಡುತ್ತಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಅವರ ಬಂಧನಕ್ಕೆ ನೀಡಲಾದ ಆಧಾರಗಳು ಅಸ್ಪಷ್ಟವಾಗಿವೆ ಎಂದು ನ್ಯಾ. ಓಸ್ವಾಲ್‌ ತಿಳಿಸಿದರು.

ದಾವೂದಿ ಅವರ ಪ್ರಕರಣದಲ್ಲಿ ಅಧಿಕಾರಿಗಳು ವಿವೇಚನೆ ಬಳಸಿಲ್ಲ ಮತ್ತು ಅತಿಯಾದ ಉತ್ಸಾಹದಿಂದ ವರ್ತಿಸಿರುವಂತೆ ತೋರುತ್ತಿದೆ ಎಂದು ನ್ಯಾ. ಧರ್‌ ಅಭಿಪ್ರಾಯಪಟ್ಟರು.

ವಕೀಲ ಶಫ್ಖತ್‌ ನಜೀರ್‌ ಅವರು ವೀರಿ ಅವರ ಪರವಾಗಿ ವಾದ ಮಂಡಿಸಿದರು. ದಾವೂದಿ ಅವರನ್ನು ವಕೀಲೆ ಅಸ್ಮಾ ರಶೀದ್ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಗಳನ್ನು ಇಲ್ಲಿ ಓದಿ].

Molvi_Abdul_Rashid__Dawoodi.pdf
Preview
Mushtaq_Ahmad_Bhat__Veeri.pdf
Preview