High Court of Jammu & Kashmir and Ladakh, Jammu wing
High Court of Jammu & Kashmir and Ladakh, Jammu wing 
ಸುದ್ದಿಗಳು

ಪಹಾಡಿ ಭಾಷಿಕರಿಗೆ ಮೀಸಲಾತಿ, ಎಸ್‌ಟಿ ಸ್ಥಾನಮಾನ ನೀಡಿಕೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕಾಶ್ಮೀರ ಹೈಕೋರ್ಟ್

Bar & Bench

ಕೇಂದ್ರಾಡಳಿತ ಪ್ರದೇಶದ ಉದ್ಯೋಗ ಮತ್ತು ಹುದ್ದೆಗಳಲ್ಲಿ ಪ್ರತಿ ಸೇವೆ, ವರ್ಗ, ಪಂಗಡ ಹಾಗೂ ದರ್ಜೆಗೆ ಸಂಬಂಧಿಸಿದಂತೆ ಪಹಾಡಿ ಭಾಷಿಕರಿಗೆ ಶೇ 4ರಷ್ಟು ಮೀಸಲಾತಿ ಒದಗಿಸುವ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ನಿಯಮಾವಳಿ- 2005ಕ್ಕೆ ಮಾಡಲಾಗಿರುವ ತಿದ್ದುಪಡಿಯನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಇತ್ತೀಚೆಗೆ ಎತ್ತಿ ಹಿಡಿದಿದೆ. [ಮೊಹಮ್ಮದ್ ಅನ್ವರ್ ಚೌಧರಿ ಇನ್ನಿತರರು ಮತ್ತು ಜಮ್ಮು ಕಾಶ್ಮೀರ ಮತ್ತಿತರರ ನಡುವಣ ಪ್ರಕರಣ].

ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಶಿಫಾರಸು ಆಧರಿಸಿ ಪಹಾಡಿ ಭಾಷಿಕರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ತಿದ್ದುಪಡಿಯನ್ನು ಸರ್ಕಾರ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಸಂಜಯ್‌ ಧರ್‌ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಅರ್ಜಿದಾರರು ಮೀಸಲಾತಿಯಿಂದ ಬಾಧಿತರವರಾಗಿರದೆ ಮೂರನೇ ವ್ಯಕ್ತಿಯಾಗಿದ್ದು ಪ್ರಕರಣದೊಂದಿಗೆ ನಂಟು ಹೊಂದಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ರೂಪಿಸದ ಹೊರತು ಸಂವಿಧಾನದ 226ನೇ ವಿಧಿಯಡಿ ಅರ್ಜಿ ಸಲ್ಲಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಅಜ್ಞಾನ, ಅನಕ್ಷರತೆ ಇತ್ಯಾದಿ ಕಾರಣದಿಂದ ಬಾಧಿತ ವ್ಯಕ್ತಿಗಳು ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಮತ್ತು ವೈಯಕ್ತಿಕ ಅಜೆಂಡಾ ಇಲ್ಲದ ವ್ಯಕ್ತಿ  ಅರ್ಜಿ ಸಲ್ಲಿಸಿದ್ದಾಗ ಮಾತ್ರ  ನ್ಯಾಯಾಲಯ ಪ್ರಕರಣವನ್ನು ಪರಿಶೀಲಿಸಬಹುದಾಗಿದೆ ಎಂದು ಅದು ವಿವರಿಸಿದೆ.

ಕಾಶ್ಮೀರ, ಹಿಮಾಲಯ ಹಾಗೂ ನೇಪಾಳದಲ್ಲಿ ಪಹಾಡಿ ಭಾಷೆಯಾಡುವ ಜನರಿದ್ದು ಇದು ಹಿಂದಿ ಮತ್ತು ನೇಪಾಳಿಯ ಉಪಭಾಷೆಯಾಗಿದೆ. ಕಾಶ್ಮೀರ ಪ್ರದೇಶದ ಪಹಾಡಿ ಮಾತನಾಡುವ ಜನರಿಗೆ ಒದಗಿಸಲಾಗುತ್ತಿರುವ ಈ ಮೀಸಲಾತಿಯನ್ನು ಜನಾಂಗೀಯ ಆಧಾರದಲ್ಲಿ ನೀಡುತ್ತಿರುವುದಾಗಿ ಮೀಸಲಾತಿ ಘೋಷಣೆ ವೇಳೆ ಕೇಂದ್ರಾಡಳಿತ ಪ್ರದೇಶ ಸರ್ಕಾರ ತಿಳಿಸಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Mohammad_Anwar_Chowdhary___Ors__v_UT_of_J_K.pdf
Preview