High Court of Jammu & Kashmir, Srinagar 
ಸುದ್ದಿಗಳು

ವಕೀಲರ ಪರಿಷತ್‌ ದೂರು: ಉರಿ ಉಪ ನ್ಯಾಯಾಧೀಶರನ್ನು ಕರ್ತವ್ಯದಿಂದ ಅಮಾನತು ಮಾಡಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌

ಪೂರ್ಣ ಪೀಠವು ನಿಲುವಳಿ ಮಂಡಿಸುವ ಮೂಲಕ ಗುರುವಾರ ಉಪ ನ್ಯಾಯಾಧೀಶರಾದ ಇಮ್ತಿಯಾಜ್‌ ಅಹ್ಮದ್‌ ಲೋನ್‌ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿದೆ.

Bar & Bench

ಉರಿಯಲ್ಲಿರುವ ವಕೀಲರ ಪರಿಷತ್ತು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಉಪ ನ್ಯಾಯಾಧೀಶರನ್ನು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ ಅಮಾನತು ಮಾಡಿದೆ. ಪೂರ್ಣ ಪೀಠವು ನಿಲುವಳಿ ಮಂಡಿಸುವ ಮೂಲಕ ಗುರುವಾರ ಇಮ್ತಿಯಾಜ್‌ ಅಹ್ಮದ್‌ ಲೋನ್‌ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಹೈಕೋರ್ಟ್‌ ಕೈಗೊಂಡಿದೆ.

“ಉರಿಯ ಉಪ ನ್ಯಾಯಾಧೀಶರಾದ ಇಮ್ತಿಯಾಜ್‌ ಅಹ್ಮದ್‌ ಲೋನ್ ಅವರ ವಿರುದ್ಧ ತನಿಖೆ ನಡೆಸುವ ಸಂಬಂಧ 31-12-2020ರಂದು ಪೂರ್ಣ ಪೀಠವು ನಿಲುವಳಿ ಮಂಡಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಇದರ ಹೊಣೆಯನ್ನು ಶ್ರೀನಗರ ಹೈಕೋರ್ಟ್‌ ಪೀಠದ ರಿಜಿಸ್ಟ್ರಾರ್‌ ಜನರಲ್‌ಗೆ ನೀಡಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಜಾವೇದ್‌ ಅಹ್ಮದ್‌ ತಿಳಿಸಿದ್ದಾರೆ.

ನಿಯಮಗಳ ಪ್ರಕಾರ ಅಮಾನತುಗೊಂಡ ನ್ಯಾಯಾಧೀಶರಿಗೆ ಜೀವನಾಧಾರ ಭತ್ಯೆಯನ್ನು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಕೆಲವು ದಿನಗಳ ಹಿಂದೆ ನ್ಯಾ. ಲೋನ್‌ ಅವರ ವಿರುದ್ಧ ವಕೀಲರ ಪರಿಷತ್ತು ದೂರು ದಾಖಲಿಸಿತ್ತು ಎಂದು ಉರಿ ವಕೀಲರ ಪರಿಷತ್‌ನ ಅಧ್ಯಕ್ಷ ಶಮೀಮ್‌ ಅಹ್ಮದ್‌ ಚಾಲ್ಕೊ 'ಬಾರ್‌ ಅಂಡ್‌ ಬೆಂಚ್‌'ಗೆ ಖಚಿತಪಡಿಸಿದರು.

ಪರಿಷತ್ತು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಲೋನ್‌ ಅವರ ವಿರುದ್ಧ ಬಾರಾಮುಲ್ಲಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಪ್ರಾಥಮಿಕ ತನಿಖೆಗೆ ಆದೇಶಿಸಿದ್ದರು. ಈ ವರದಿಯನ್ನು ಹೈಕೋರ್ಟ್‌ಗೆ ರವಾನಿಸಲಾಗಿದ್ದು, ಅದನ್ನು ಆಧರಿಸಿ ಅವರನ್ನು ಅಮಾನತುಗೊಳಿಸಲು ಹೈಕೋರ್ಟ್ ನಿರ್ಧರಿಸಿತು.

ಕುಪ್ವಾರದ ಡಿಎಲ್‌ಎಸ್‌ಎ ಕಾರ್ಯದರ್ಶಿ ನೂರ್‌ ಮೊಹಮ್ಮದ್‌ ಮಿರ್‌ ಅವರನ್ನು ಹೈಕೋರ್ಟ್‌ ವರ್ಗಾವಣೆ ಮಾಡಿದ್ದು, ಲೋನ್‌ ಅವರ ಸ್ಥಾನಕ್ಕೆ ಉಪ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ.