Naresh Gowda
Naresh Gowda Facebook
ಸುದ್ದಿಗಳು

ಜಾರಕಿಹೊಳಿ ಸಿ ಡಿ ಪ್ರಕರಣ: ಯಾರಿಗೆ, ಯಾವಾಗ ಎಷ್ಟು ಹಣ ಪಾವತಿಸಿದ್ದೀರಿ ಎಂದು ಪ್ರಶ್ನಿಸಿದ ನ್ಯಾಯಾಲಯ

Siddesh M S

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡುವ ಉದ್ದೇಶದಿಂದ ಬ್ಲ್ಯಾಕ್‌ ಮೇಲ್‌ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ನರೇಶ್‌ ಗೌಡ ಬಿ ಎಂ ಮತ್ತು ಆರ್‌ ಶ್ರವಣ್‌ ಕುಮಾರ್‌ ಅವರ ನಿರೀಕ್ಷಣಾ ಜಾಮೀನು ಮನವಿಯ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೂ.8ಕ್ಕೆ ಕಾಯ್ದಿರಿಸಿದೆ.

ನರೇಶ್‌ ಮತ್ತು ಶ್ರವಣ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಾಧೀಶರಾದ ಶ್ರೀಧರ್‌ ಗೋಪಾಲಕೃಷ್ಣ ಭಟ್‌ ಅವರಿದ್ದ ಪೀಠವು ತೀರ್ಪು ಕಾಯ್ದಿರಿಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್‌ಐಟಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದರು. ವಿಚಾರಣೆ ವೇಳೆ ನ್ಯಾಯಾಲಯವು, "ನೀವು (ರಮೇಶ್‌ ಜಾರಕಿಹೊಳಿ) ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದೀರಿ? ಇದನ್ನು ದೂರು ದಾಖಲಿಸುವಾಗ ಏಕೆ ಉಲ್ಲೇಖಿಸಿಲ್ಲ," ಎಂದು ಪ್ರಶ್ನಿಸಿತು.

ಜಾಮೀನು ಕೋರಿರುವ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ನಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಅತ್ಯಾಚಾರ ಆರೋಪಿಯಾಗಿರುವ ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ನಮ್ಮ ಕಕ್ಷಿದಾರರನ್ನು ಗುರಿಯಾಗಿಸಿ, ಕಿರುಕುಳ ನೀಡಲಾಗುತ್ತಿದೆ. ಎಸ್‌ಐಟಿ ಪೊಲೀಸರ ಈ ತನಿಖೆಯಿಂದಾಗಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರಕಿಹೊಳಿ ಅವರು ಫಿರ್ಯಾದಿ ಸ್ಥಾನಕ್ಕೆ ಬಂದಿದ್ದಾರೆ. ಹೀಗಾಗಿ, ಪ್ರಾಸಿಕ್ಯೂಷನ್‌ ಸಾಕ್ಷಿ ಎಂದು ಜಾರಕಿಹೊಳಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದರು.

“ತಮ್ಮ ಹೇಳಿಕೆಯಲ್ಲಿ ಜಾರಕಿಹೊಳಿ ಅವರು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿಯ ಬಗ್ಗೆ ಮಾತನಾಡಿದ್ದಾರೆ. ಆದರೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164 ಅಡಿ ಸಂತ್ರಸ್ತ ಯುವತಿ ದಾಖಲಿಸಿರುವ ಹೇಳಿಕೆಯನ್ನು ನೀಡಲಾಗುತ್ತಿಲ್ಲ. ರಮೇಶ್‌ ಜಾರಕಿಹೊಳಿ ಅವರು ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದಾಗಿ ಎಸ್‌ಐಟಿ ಮುಂದೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಜಾರಕಿಹೊಳಿ ಆಪಾದಿಸುತ್ತಿರುವಂತೆ ಸಿ ಡಿಯನ್ನು ಸೃಷ್ಟಿ ಮಾಡಲಾಗಿದೆ ಎಂಬ ವಾದ ಸುಳ್ಳಾಗಲಿದೆ. ಇದನ್ನು ನ್ಯಾಯಾಲಯದ ಗಮನಕ್ಕೆ ಅವರು ತರುತ್ತಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ ಎಸ್‌ಐಟಿ ಪೊಲೀಸರು ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ಸಂತ್ರಸ್ತ ಯುವತಿ ಹಾಗೂ ನಮ್ಮ ಕಕ್ಷಿದಾರರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕಕ್ಷಿದಾರರ ವಿರುದ್ಧ ದಾಖಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ” ಎಂದು ವಾದಿಸಿದರು.

“ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ದೂರಿನ ಭಾಗವಾಗಿ ನರೇಶ್‌ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಆತನ ಹೆಸರು ವಿಳಾಸದ ಬಗ್ಗೆ ಮಾಹಿತಿ ಇದ್ದರೂ ಏತಕ್ಕಾಗಿ ನರೇಶ್‌ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿಲಿಲ್ಲ, ರಮೇಶ್‌ ಜಾರಕಿಹೊಳಿ ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನ ಮಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಈಗ ಪೊಲೀಸರು ಹಣ ವಸೂಲಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಸ್ಥಿತ್ಯಂತರ ಮಾಡಲಾಗುತ್ತಿದೆ. ಒಂದೊಮ್ಮೆ ರಮೇಶ್‌ ಜಾರಕಿಹೊಳಿ ಅವರು ಹಣ ನೀಡಿದ್ದರೆ ಎಷ್ಟು ಮೊತ್ತವನ್ನು ಯಾರಿಗೆ ನೀಡಿದ್ದಾರೆ ಎಂಬ ಅಂಶ ಜಾರಕಿಹೊಳಿ ಅವರಿಗೆ ಬಿಟ್ಟು ಮತ್ಯಾರಿಗೆ ತಿಳಿದರಲು ಸಾಧ್ಯ? ದೂರು ನೀಡುವಾಗ ಇದನ್ನು ಜಾರಕಿಹೊಳಿ ಅವರು ಏಕೆ ಉಲ್ಲೇಖಿಸಿಲ್ಲ? ಯಾವ ರೀತಿಯಲ್ಲಿ ಹಣ ನೀಡಲಾಗಿದೆ ಎಂಬುದನ್ನು ವಿವರಿಸಬೇಕಿತ್ತು. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ಎ ಅಡಿ ದೂರು ದಾಖಲಿಸಬೇಕಾದರೆ, ಲೈಂಗಿಕ ಸಂಪರ್ಕದ ದೃಶ್ಯಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಅಪ್‌ಲೋಡ್‌ ಮಾಡಬೇಕು. ಇದನ್ನು ಯಾರು ಅಪ್‌ಲೋಡ್‌ ಮಾಡಿದ್ದಾರೆ ಎಂಬುದನ್ನು ರಮೇಶ್‌ ಜಾರಕಿಹೊಳಿ, ಸಾಕ್ಷಿಗಳು ಅಥವಾ ಪೊಲೀಸರು ಯಾರೂ ಬಹಿರಂಗಪಡಿಸುತ್ತಿಲ್ಲ. ಹೀಗಿರುವಾಗ ಸೆಕ್ಷನ್‌ 67ಎ ಅಡಿ ಹೇಗೆ ಪ್ರಕರಣ ದಾಖಲಿಸಲಾಗಿದೆ? ಸೆಕ್ಷನ್‌ 67ಎ ಇಲ್ಲವಾದರೆ ಉಳಿದೆಲ್ಲಾ ಆರೋಪಗಳು ಜಾಮೀನಿಗೆ ಅರ್ಹವಾಗಿವೆ” ಎಂದು ವಾದಿಸಿದರು.

ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು “ನಿಮ್ಮ (ಜಾರಕಿಹೊಳಿ) ಪ್ರಕಾರ ನೀವು ಹಣ ಪಾವತಿಸಿದ್ದೀರಿ. ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದೀರಿ? ಇದನ್ನು ದೂರು ದಾಖಲಿಸುವಾಗ ಏಕೆ ಉಲ್ಲೇಖಿಸಿಲ್ಲ. ಅಲ್ಲದೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನೀವು ಹೇಳಿಕೆಯನ್ನು ನೀಡುತ್ತಿದ್ದೀರಿ. ಆದರೆ, ಎಸ್‌ಐಟಿ ಮುಂದೆ ನೀಡಿರುವ ಸ್ವಯಂಪ್ರೇರಿತ ಹೇಳಿಕೆಯನ್ನು ಏಕೆ ಲಗತ್ತಿಸಿಲ್ಲ? ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಸಂತ್ರಸ್ತೆ ದಾಖಲಿಸಿರುವ ಹೇಳಿಕೆಯನ್ನು ಏಕೆ ಸಲ್ಲಿಸಿಲ್ಲ” ಎಂದು ಪ್ರಶ್ನಿಸಿದರು.

ನ್ಯಾಯಾಲಯದ ಪ್ರಶ್ನೆಗಳಿಗೆ ಸಮಜಾಯಿಷಿ ನೀಡುವ ಪ್ರಯತ್ನವನ್ನು ಪ್ರಾಷಿಕ್ಯೂಷನ್‌ ಪರ ಹಿರಿಯ ವಕೀಲರಾದ ಕಿರಣ್‌ ಜವಳಿ ಮಾಡಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠವು ಜೂನ್‌ 8ಕ್ಕೆ ನಿರೀಕ್ಷಣಾ ಜಾಮೀನು ಮನವಿಯ ತೀರ್ಪು ಕಾಯ್ದಿರಿಸಿದೆ.

ಇತ್ತ ಸಿ ಡಿ ಪ್ರಕರಣ ಬೆಳಕಿಗೆ ಬರುತ್ತಲೇ ನರೇಶ್‌ ಮತ್ತು ಶ್ರವಣ್‌ ಭೂಗತರಾಗಿದ್ದಾರೆ ಎನ್ನಲಾಗಿದೆ. ಈ ಇಬ್ಬರ ಬಂಧನಕ್ಕೆ ಎಸ್‌ಐಟಿ ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟಿದ್ದು, ಇನ್ನೂ ಅವರ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.