Ramesh Jarakiholi and Karnataka High Court
Ramesh Jarakiholi and Karnataka High Court 
ಸುದ್ದಿಗಳು

[ಜಾರಕಿಹೊಳಿ ಸಿ ಡಿ ಪ್ರಕರಣ] ಎಫ್‌ಐಆರ್‌, ಎಸ್‌ಐಟಿ ರಚನೆ ವಜಾ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಶ್ರವಣ್‌, ನರೇಶ್‌

Siddesh M S

ತನ್ನ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ಸಿ ಡಿ ಸೃಷ್ಟಿಸಿ, ಬ್ಲ್ಯಾಕ್‌ ಮೇಲ್‌ ಮತ್ತು ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಅನಾಮಿಕರ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ವಜಾ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಮನವಿ ಸಲ್ಲಿಸಲಾಗಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಪಟ್ಟಿಯಾಗಬೇಕಿದೆ.

ಯುವತಿಯೊಬ್ಬರ ಜೊತೆ ರಮೇಶ್‌ ಜಾರಕಿಹೊಳಿ ಅವರಿರುವ ಅಶ್ಲೀಲ ವಿಡಿಯೊವೊಂದನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಮಾಡಿದ ಆರೋಪಿಗಳು ಎನ್ನಲಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ ಶ್ರವಣ್‌ ಕುಮಾರ್‌ ಮತ್ತು ತುಮಕೂರು ಜಿಲ್ಲೆಯ ನರೇಶ್‌ ಬಿ ಎಂ ಅವರು ತಮ್ಮ ವಿರುದ್ಧದ ಎಫ್‌ಐಆರ್‌ ವಜಾ ಕೋರಿ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಸಿ ಡಿ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿರುವ ವಿಶೇಷ ತನಿಖಾ ದಳವನ್ನು, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಬೆಂಗಳೂರು ಪೊಲೀಸ್‌ ಆಯುಕ್ತರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಸದರಿ ಪ್ರಕರಣದಲ್ಲಿ ಆರೋಪಿಗಳಾದ ಮಾಧ್ಯಮವೊಂದರ ತಾಂತ್ರಿಕ ವಿಭಾಗದಲ್ಲಿದ್ದ ಶ್ರವಣ್‌ ಮತ್ತು ಪತ್ರಕರ್ತ ನರೇಶ್‌ ಅವರಿಗೆ ವಿಚಾರಣಾಧೀನ ನ್ಯಾಯಾಲಯವು ಕಳೆದ ವರ್ಷದ ಜುಲೈನಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮಾಜಿ ಶಾಸಕ ಎಂ ವಿ ನಾಗರಾಜು ಅವರ ಮೂಲಕ 2021ರ ಮಾರ್ಚ್‌ 13ರಂದು ರಮೇಶ್‌ ಜಾರಕಿಹೊಳಿ ಅವರು ಸದಾಶಿವನಗರದಲ್ಲಿ ದಾಖಲಿಸಿರುವ ಎಫ್‌ಐಆರ್‌ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದಿದ್ದು, ಅದನ್ನು ವಜಾ ಮಾಡಬೇಕು. ಎಸ್‌ಐಟಿ ರಚಿಸುವುದಕ್ಕೆ ಸಂಬಂಧಿಸಿದಂತೆ ಅಂದಿನ ಗೃಹ ಸಚಿವ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು 2021ರ ಮಾರ್ಚ್‌ 10ರಂದು ಮಾಡಿರುವ ಆದೇಶವು ಕಾನೂನುಬಾಹಿರವಾಗಿದ್ದು, ಅದನ್ನು ವಜಾ ಮಾಡಬೇಕು. ಎಸ್‌ಐಟಿ ರಚಿಸುವುದರ ಕುರಿತಾದ 2021ರ ಮಾರ್ಚ್‌ 11ರಂದು ಬೆಂಗಳೂರು ಆಯುಕ್ತರು ಮಾಡಿರುವ ಆದೇಶವನ್ನು ವಜಾ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಮನವಿ ಇತ್ಯರ್ಥವಾಗುವವರೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 385, 465, 469 120-B ಜೊತೆಗೆ 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್‌ 67ರ ಅಡಿ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿರುವುದಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಮನವಿಯಲ್ಲೇನಿದೆ?

ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಮೇಶ್‌ ಜಾರಕಿಹೊಳಿ ಅವರು ಯುವತಿ ಒಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಿಗೇ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಪ್ರಕರಣದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ದೂರು ದಾಖಲಾಗದೇ ಇದ್ದರೂ ಜಾರಕಿಹೊಳಿ ಅವರ ಪತ್ರ ಆಧರಿಸಿ 2021ರ ಮಾರ್ಚ್‌ 10ರಂದು ಅಂದಿನ ಗೃಹ ಸಚಿವ ಬೊಮ್ಮಾಯಿ ಅವರು ಕಾನೂನುಬಾಹಿರವಾಗಿ ಎಸ್‌ಐಟಿ ರಚಿಸಲು ಆದೇಶಿಸಿದ್ದರು. ಇದರ ಅನ್ವಯ ಪೊಲೀಸ್‌ ಆಯುಕ್ತರು ಹಿರಿಯ ಐಪಿಎಸ್‌ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದರು. ಆನಂತರ ತಮ್ಮ ಆಪ್ತ, ಮಾಜಿ ಶಾಸಕ ಎಂ ವಿ ನಾಗರಾಜು ಅವರ ಮೂಲಕ ರಮೇಶ್‌ ಜಾರಕಿಹೊಳಿ ಅವರು ಸದಾಶಿವ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಜಾರಕಿಹೊಳಿ ಅವರ ಹೆಸರಿಗೆ ಕೆಸರು ಎರಚುವ ಸಂಬಂಧ ಹಾಗೂ ರಾಜಕೀಯವಾಗಿ ಅವರನ್ನು ಮುಗಿಸಲು ಮತ್ತು ವಂಚಿಸಲು, ಹಣ ಸುಲಿಗೆ ಮಾಡಲು ಮತ್ತು ಮಾನಸಿಕವಾಗಿ ಅವರನ್ನು ದುರ್ಬಲಗೊಳಿಸಲು ನಕಲಿ ಸಿ ಡಿ ಸೃಷ್ಟಿಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ನೀಡಿರುವ ದೂರಿನಲ್ಲಿ ವಿವರಿಸಲಾಗಿತ್ತು. ನಕಲಿ ಸಿ ಡಿ ಸೃಷ್ಟಿಯ ಹಿಂದೆ ಹಲವು ಮಂದಿ ಇದ್ದು, ರಾಜಕೀಯ ಅನಿಶ್ಚಿತತೆ ಸೃಷ್ಟಿಸಲು ನಕಲಿ ಸಿ ಡಿಯನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ದೂರನ್ನು ಆಯುಕ್ತರು ಎಸ್‌ಐಟಿಯಲ್ಲಿ ತನಿಖಾಧಿಕಾರಿಗೆ ವರ್ಗಾಯಿಸಿದ್ದರು. ಇದನ್ನು ಆಧರಿಸಿ ಎಸ್‌ಐಟಿ ಅಧಿಕಾರಿಗಳು ಅರ್ಜಿದಾರರಾದ ಶ್ರವಣ್‌ ಮತ್ತು ನರೇಶ್‌ ಅವರ ಮನೆಯಲ್ಲಿ ದಾಳಿ, ಶೋಧ ನಡೆಸಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಟಿ ವಿ ಮಾಧ್ಯಮದ ಪತ್ರಕರ್ತರ ಜೊತೆ ಎಸ್‌ಐಟಿ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಅವರು ಅರ್ಜಿದಾರರ ಶರಣ್‌ ಮತ್ತು ನರೇಶ್‌ ಪ್ರಮುಖ ಪಿತೂರಿದಾರರು ಎಂಬ ಮಾಹಿತಿ ನೀಡಿದ್ದರು. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಅರ್ಜಿದಾರರ ವಿರುದ್ದ ಮಾಜಿ ಸಹೋದ್ಯೋಗಿಗಳು ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.