Ramesh Jarakiholi and Karnataka HC 
ಸುದ್ದಿಗಳು

[ಜಾರಕಿಹೊಳಿ ಪ್ರಕರಣ] ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅನುಪಸ್ಥಿತಿ; ಜೂನ್‌ 27ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಎರಡು ತಿಂಗಳ ಬಳಿ ಪ್ರಕರಣವು ನ್ಯಾ. ಸುನಿಲ್‌ ದತ್‌ ಯಾದವ್‌ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿದಾರರ ಪರ ವಕೀಲರ ಕೋರಿಕೆಯ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ.

Bar & Bench

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಮುಂದೂಡಿದೆ.

ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಜೈಸಿಂಗ್‌ ಅವರ ಸಹೋದ್ಯೋಗಿ ವಕೀಲೆ ಆಕೃತಿ ಧವನ್‌ ಅವರು “ಪ್ರಕರಣದಲ್ಲಿ ಇಂದಿರಾ ಜೈಸಿಂಗ್‌ ಅವರು ಸಂತ್ರಸ್ತೆಯನ್ನು ಪ್ರತಿನಿಧಿಸಿದ್ದಾರೆ. ಇಂದು ಅವರು ನಮಗೆ ಲಭ್ಯವಾಗುತ್ತಿಲ್ಲ. ಇದ್ದಕ್ಕಿದ್ದಂತೆ ಪ್ರಕರಣ ವಿಚಾರಣೆಗೆ ಬಂದಿದೆ. ಹೀಗಾಗಿ, ಜೂನ್‌ 14ರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು” ಎಂದರು.

ಇದಕ್ಕೆ ಸಮ್ಮತಿಸಿದ ಪೀಠವು ಜೂನ್‌ 27ರಂದು ಪ್ರಕರಣದ ವಿಚಾರಣೆ ನಡೆಸಲಾಗುವುದು. ಮಧ್ಯಂತರ ಆದೇಶವು ಮುಂದುವರಿಯಲಿದೆ ಎಂದು ಹೇಳಿತು.

ಕಳೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ನಿಗದಿಯಾಗಿತ್ತು. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಹಾಲಿ ಶಾಸಕರಾಗಿದ್ದಾರೆ. ಮಾಜಿ, ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ವಿಶೇಷ ಪೀಠವಿದೆ. ಹೀಗಾಗಿ, ಸದರಿ ಮನವಿಗಳನ್ನು ರೋಸ್ಟರ್‌ ಪೀಠದ ಮುಂದೆ ಇಡಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಿ ಒಪ್ಪಿಗೆ ಪಡೆಯುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾ. ನಾಗಪ್ರಸನ್ನ ಆದೇಶಿಸಿದ್ದರು. ಹೀಗಾಗಿ, ಇಂದು ಈ ಮನವಿಗಳನ್ನು ನ್ಯಾ. ಸುನಿಲ್‌ ದತ್‌ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು.

ಹಿಂದಿನ ವಿಚಾರಣೆ ವೇಳೆ ಸಂತ್ರಸ್ತೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು “ಎಸ್‌ಐಟಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಯಲ್ಲಿ ಪ್ರಮುಖ ಕೋರಿಕೆಗಳಿವೆ ಅವುಗಳನ್ನು ಆಲಿಸಿದರೆ ಸಾಕು ಎಂದು ಪೀಠದ ಮನವೊಲಿಸುವ ಯತ್ನ ಮಾಡಿದ್ದರು. ಆಗ ನ್ಯಾ. ನಾಗಪ್ರಸನ್ನ ಅವರು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ನಿರ್ದಿಷ್ಟ ಪೀಠವನ್ನು ಗೊತ್ತು ಮಾಡಿ ಆದೇಶ ಮಾಡಲಾಗಿದೆ. ನಾನು ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತದೆಯೇ” ಎಂದು ಪ್ರಶ್ನಿಸಿದ್ದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ನ್ಯಾ. ಸುನಿಲ್‌ ದತ್‌ ಯಾದವ್ ಅವರು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರರಕಣಗಳನ್ನು ಆಲಿಸಲಿದ್ದಾರೆ” ಎಂದು ತಿಳಿಸಿದ್ದನ್ನು ಇಲ್ಲಿ ನೆನೆಯಬಹುದು.