Ramesh Jarakiholi and Karnataka HC 
ಸುದ್ದಿಗಳು

[ಸಿ ಡಿ 'ಬ್ಲ್ಯಾಕ್‌ಮೇಲ್‌' ಪ್ರಕರಣ] ತನಿಖಾ ವರದಿ ಸಲ್ಲಿಸದಿರಲು ಎಸ್‌ಐಟಿಗೆ ನಿರ್ಬಂಧ; ಅಮಿಕಸ್‌ ನೇಮಿಸಿದ ಹೈಕೋರ್ಟ್‌

ಪ್ರಕರಣದ ಕುರಿತು ಕಾನೂನಿಗೆ ಪೂರಕವಾದ ಮತ್ತು ಅದಕ್ಕೆ ಸಂಬಂಧಿಸಿದಂತೆ ಆಧರಿಸಲಿರುವ ಅಂಶಗಳನ್ನು ಒಳಗೊಂಡ ಲಿಖಿತ ವಾದವನ್ನು ಉಭಯ ಪಕ್ಷಕರಾರರು ಮುಂಚಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದ ನ್ಯಾಯಾಲಯ.

Siddesh M S

ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಹೈಕೋರ್ಟ್‌ ಅನುಮತಿ ಪಡೆಯದೇ ವಿಚಾರಣಾಧೀನ ನ್ಯಾಯಾಲಕ್ಕೆ ವಿಶೇಷ ತನಿಖಾ ದಳವು (ಎಸ್‌ಐಟಿ) ಸಲ್ಲಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶ ಮಾಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಕಾನೂನು ವಿಚಾರಗಳ ಕುರಿತು ನ್ಯಾಯಾಲಯಕ್ಕೆ ಸಲಹೆ ಮಾಡಲು ಹಿರಿಯ ವಕೀಲ ಸಂದೇಶ್‌ ಚೌಟ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಿದೆ.

ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಹಾಗೂ ಮತ್ತಿಬ್ಬರು ಆರೋಪಿಗಳು ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಪ್ರಕರಣದ ಕುರಿತು ಕಾನೂನಿಗೆ ಪೂರಕವಾದ ಮತ್ತು ಅದಕ್ಕೆ ಸಂಬಂಧಿಸಿದಂತೆ ಆಧರಿಸಲಿರುವ ಅಂಶಗಳನ್ನು ಒಳಗೊಂಡ ಲಿಖಿತ ವಾದವನ್ನು ಉಭಯ ಪಕ್ಷಕರಾರರು ಮುಂಚಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೇ, ವಿವಾದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಕರಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾಖಲೆಗಳನ್ನು ಮುಂಚಿತವಾಗಿ ಪರಸ್ಪರ ಹಂಚಿಕೊಳ್ಳಬೇಕು. ಉಭಯ ಪಕ್ಷಕಾರರು ಎತ್ತುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲಹೆ ಮಾಡಲು ಹಿರಿಯ ವಕೀಲ ಸಂದೇಶ್‌ ಚೌಟ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಮಿಕಸ್‌ ಕ್ಯೂರಿ ಅವರಿಗೆ ರಿಜಿಸ್ಟ್ರಿ ಸಲ್ಲಿಸಬೇಕು” ಎಂದು ಪೀಠವು ಆದೇಶ ಮಾಡಿದೆ.

Sandesh Chouta, Senior Counsel

ವಿಚಾರಣೆಯ ಆರಂಭದಲ್ಲಿ ಪೀಠವು ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರಿಗೆ “ಪ್ರಕರಣದಲ್ಲಿ ಯಾವೆಲ್ಲಾ ವಿಷಯಗಳು ಇವೆ ಎನ್ನುವುದನ್ನು ಐದು ನಿಮಿಷಗಳಲ್ಲಿ ತಿಳಿಸಿ. ನಾನು ಅಮಿಕಸ್‌ ಕ್ಯೂರಿ ನೇಮಕ ಮಾಡುವ ಉದ್ದೇಶ ಹೊಂದಿದ್ದೇನೆ” ಎಂದಿತು.

ಆಗ ಜೈಸಿಂಗ್‌ ಅವರು “ನ್ಯಾಯಾಲಯವು ಎಸ್‌ಐಟಿಯನ್ನು ರಚಿಸಿದೆಯೇ? ಎಸ್‌ಐಟಿ ನೇಮಕ ಮಾಡುವ ಅಧಿಕಾರ ಅಂದಿನ ಗೃಹ ಸಚಿವರಿಗೆ ಇತ್ತೆ? ಎಸ್‌ಐಟಿಯು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯು ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ಬರುತ್ತದೆಯೇ ಎಂಬ ಪ್ರಮುಖ ಪ್ರಶ್ನೆಗಳಿವೆ” ಎಂದರು.

ಮುಂದುವರಿದು, “ಸಂತ್ರಸ್ತೆಯು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಮತ್ತಿತರ ಆರೋಪಗಳನ್ನು ಒಳಗೊಂಡ ದೂರಿನ ತನಿಖೆ ನಡೆಸಲು ಎಸ್‌ಐಟಿ ನೇಮಕ ಮಾಡಬೇಕು ಎಂದು ಕೋರಿದ್ದೇನೆ. ಸಂವಿಧಾನದ 226ರ ಅಡಿ ಹೈಕೋರ್ಟ್‌, ಸಂವಿಧಾನದ 32ರ ಅಡಿ ಸುಪ್ರೀಂ ಕೋರ್ಟ್‌ ಮಾತ್ರ ಎಸ್‌ಐಟಿ ರಚಿಸಬಹುದಾಗಿದೆ” ಎಂದರು.

ಅಲ್ಲದೇ, “ಸಿಆರ್‌ಪಿಸಿ ಮತ್ತು ಕರ್ನಾಟಕ ಪೊಲೀಸ್‌ ಕಾಯಿದೆಯ ಅಡಿಯಲ್ಲಿ ಎಸ್‌ಐಟಿ ನೇಮಿಸುವ ಅಧಿಕಾರ ಅಂದಿನ ಗೃಹ ಸಚಿವರಿಗೆ ಇರಲಿಲ್ಲ. ಪ್ರಕರಣ ನಡೆದಿರುವ ವ್ಯಾಪ್ತಿ ಪ್ರದೇಶವಾದ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ನೀಡಿದ್ದರಿಂದ ಅದರ ತನಿಖೆಯನ್ನು ಠಾಣಾಧಿಕಾರಿ ಮಾಡಬೇಕು. ಇದನ್ನು ಎಸ್‌ಐಟಿ ಹೈಜಾಕ್‌ ಮಾಡಿರುವುದೇಕೆ? ಅಲ್ಲದೇ ಸಂತ್ರಸ್ತೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲಾಗಿದೆ. ಒಂದೊಮ್ಮೆ, ನನ್ನ ಎಲ್ಲಾ ವಾದದಲ್ಲಿ ನಾನು ವಿಫಲವಾದರೂ ಪ್ರಕರಣದ ಮೇಲೆ ನಿಗಾ ಇಟ್ಟಿರುವ ಈ ನ್ಯಾಯಾಲಯವನ್ನು ಸಂತುಷ್ಟಗೊಳಿಸಬೇಕಿದೆ. ಅಂತಿಮ ವರದಿ ಪರಿಶೀಲಿಸಿ, ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಾಗಿದೆಯೇ ಎಂಬುದು ನ್ಯಾಯಾಲಯಕ್ಕೆ ದೃಢವಾಗಬೇಕಿದೆ. ನ್ಯಾಯಾಲಯಕ್ಕೆ ಸಮಾಧಾನವಾದ ನಂತರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಆದೇಶಿಸಬಹುದು. ಆದರೆ, ಇದ್ಯಾವುದನ್ನೂ ಪಾಲಿಸಲಾಗಿಲ್ಲ. ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ಅವುಗಳನ್ನು ನಮಗೂ ನೀಡಲಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಸಂತ್ರಸ್ತೆ ಹೇಳಿಕೆ ನೀಡಿದ ಮೇಲೆ ಪ್ರಕರಣ ವಿಚಾರಣೆಗೆ ಒಳಪಡಬೇಕು. ಆದರೆ ಇಲ್ಲಿ ಹೇಗೆ ಅಂತಿಮ ವರದಿ ಸಲ್ಲಿಸಲಾಗಿದೆ?” ಎಂದು ವಿಸ್ತೃತವಾಗಿ ಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ಪೀಠವು “ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಸರಣಿ ಆರಂಭವಾಗುವುದಕ್ಕೂ ಮುನ್ನ ಪಕ್ಷಕಾರರು ಯಾವ ನಿಲುವು ಕೈಗೊಳ್ಳುತ್ತೀರಿ ಎಂಬುದಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ (ಸಿನಾಪ್ಸಿಸ್‌) ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ನಿಮ್ಮ (ಪಕ್ಷಕಾರರು) ನಡುವೆ ಹಂಚಿಕೊಳ್ಳಬೇಕು. ಅಂತಿಮ ವಿಚಾರಣೆಯ ಬಳಿಕವೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕಾರರು ಸಂಕ್ಷಿಪ್ತ ವರದಿ ಸಲ್ಲಿಸಬಹುದು” ಎಂದಿತು.

ವರದಿ ಸಲ್ಲಿಸದಿರಲು ಎಸ್‌ಐಟಿಗೆ ನಿರ್ಬಂಧ

ಯುವತಿಯೊಬ್ಬರ ಜೊತೆ ಅಶ್ಲೀಲ ವಿಡಿಯೊವೊಂದನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಮಾಡಿದ ಆರೋಪಿಗಳು ಎನ್ನಲಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ ಶ್ರವಣ್‌ ಕುಮಾರ್‌ ಮತ್ತು ತುಮಕೂರು ಜಿಲ್ಲೆಯ ನರೇಶ್‌ ಬಿ ಎಂ ಅವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಜಾರಕಿಹೊಳಿ ಅವರು ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸದಂತೆ ಹೈಕೋರ್ಟ್‌ ನಿರ್ಬಂಧಿಸಿದೆ.

ಅಲ್ಲದೇ, ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಬೆಂಗಳೂರು ಪೊಲೀಸ್‌ ಆಯುಕ್ತರ ಪರವಾಗಿ ಎಚ್‌ಸಿಜಿಪಿ (ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲರು) ನೋಟಿಸ್‌ ಸ್ವೀಕರಿಸಲಿದ್ದು, ಎಸ್‌ಐಟಿ ಪರವಾಗಿ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರಿಗೆ ನೋಟಿಸ್‌ ಪಡೆಯಲು ಹೈಕೋರ್ಟ್‌ ನಿರ್ದೇಶಿಸಿದೆ.‌ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಪ್ರತಿನಿಧಿಸಿರುವ ವಕೀಲರಿಗೆ ರಿಟ್‌ ಮನವಿ ನೀಡಲು ಅರ್ಜಿದಾರರ ಪರ ವಕೀಲರಿಗೆ ಆದೇಶ ಮಾಡಿದೆ.

ವಿಶೇಷ ತನಿಖಾ ದಳದ ಸಿಂಧುತ್ವವನ್ನು ಮೊದಲಿಗೆ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಸದರಿ ಪ್ರಕರಣದಲ್ಲಿ ಅರ್ಜಿದಾರರು ಸಹ ಆರೋಪಿಗಳಾಗಿರುವುದರಿಂದ ಸುಪ್ರೀಂ ಕೋರ್ಟ್‌ ಆದೇಶ ಇಲ್ಲಿಗೂ ಅನ್ವಯಿಸಲಿದೆ. ಇದನ್ನು ಪ್ರತ್ಯೇಕಿಸಲಾಗದು. ಈ ಮನವಿಯನ್ನು ಅದರ ಜೊತೆಗೆ ಮಿಳಿತಗೊಳಿಸಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿತು.

ಬ್ಲ್ಯಾಕ್‌ಮೇಲ್‌ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಹೈಕೋರ್ಟ್‌ ಅನುಮತಿ ಪಡೆಯದೇ ಅದರ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಬಾರದು. ಸಿ ಡಿ ಪ್ರಕರಣದ ಸಂತ್ರಸ್ತೆಯು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಅತ್ಯಾಚಾರ ಮತ್ತಿರರ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಕರಣದ ವರದಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಎಸ್‌ಐಟಿಗೆ ಅನುಮತಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ವಿಶೇಷ ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2022ರ ಫೆಬ್ರವರಿ 18ರಂದು ಮೊದಲಿಗೆ ಎಸ್‌ಐಟಿ ವ್ಯಾಪ್ತಿ ನಿರ್ಧರಿಸುವಂತೆ ಹೈಕೋರ್ಟ್‌ಗೆ ಆದೇಶ ಮಾಡಿತ್ತು. ಅಲ್ಲದೇ, ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿತ್ತು. ಹೈಕೋರ್ಟ್‌ ಅನುಮತಿ ಪಡೆಯದೇ ಎಸ್‌ಐಟಿಯು ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂಬ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವು ನರೇಶ್‌ ಮತ್ತು ಶ್ರವಣ್‌ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ನ್ಯಾ. ಸುನಿಲ್‌ ದತ್‌ ಯಾದವ್‌ ಅವರ ಪೀಠವು ಇಂದು ಸ್ಪಷ್ಟಪಡಿಸಿದೆ. ಶ್ರವಣ್‌ ಮತ್ತು ನರೇಶ್‌ ಅವರನ್ನು ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಪ್ರತಿನಿಧಿಸಿದ್ದರು.

ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 5ಕ್ಕೆ ಮುಂದೂಡಿತು.