ಉತ್ತರ ಪ್ರದೇಶದ ಜೌನ್‌ಪುರ್‌ನಲ್ಲಿರುವ ಅಟಾಲಾ ಮಸೀದಿ ಮೂಲತಃ 'ಅಟಾಲಾ ದೇವಿ ಮಂದಿರ'ವಾಗಿತ್ತು ಎಂದು ಹಿಂದೂ ಪರ ಸಂಘಟನೆ ಹೂಡಿರುವ ದಾವೆಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸ್ಥಳೀಯ ನ್ಯಾಯಾಲಯ ಕಳೆದ ಮೇ ತಿಂಗಳಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಮಸೀದಿ ಅಲಾಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ [ವಕ್ಫ್ ಅಟಾಲಾ ಮಸೀದಿ ಮತ್ತು ಸ್ವರಾಜ್ ವಾಹಿನಿ ಸಂಸ್ಥೆ ಇನ್ನಿತರರ ನಡುವಣ ಪ್ರಕರಣ].
ತನ್ನ ಪ್ರಾತಿನಿಧಿಕ ಸಾಮರ್ಥ್ಯದ ಸ್ವರೂಪದಲ್ಲಿ ಹಿಂದೂ ಸಂಘಟನೆ ಸ್ವರಾಜ್ ವಾಹಿನಿ ಸಂಸ್ಥೆ ಹಾಗೂ ಸಂತೋಷ್ ಕುಮಾರ್ ಮಿಶ್ರಾ ಎಂಬುವವರು ಜೌನ್‌ಪುರದ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಮಸೀದಿ ಪ್ರಶ್ನಿಸಿದೆ.
ವಿವಾದಿತ ಆಸ್ತಿ 'ಅಟಾಲಾ ದೇವಿ ಮಂದಿರ' 14ನೇ ಶತಮಾನಕ್ಕೆ ಸೇರಿದ್ದು ಮತ್ತು ಅಲ್ಲಿ ಪೂಜೆ ಮಾಡುವ ಹಕ್ಕು ಸನಾತನ ಧರ್ಮದ ಅನುಯಾಯಿಗಳಿಗೆ ಇದೆ ಎಂದು ಘೋಷಿಸುವಂತೆ ಹಿಂದೂ ಸಂಘಟನೆ ಕೋರಿತ್ತು. ವಿವಾದಿತ ಆಸ್ತಿಯನ್ನು ತಮಗೆ ನೀಡಲು ಆದೇಶಿಸಬೇಕು ಮತ್ತು ಈ ಆಸ್ತಿ ಪ್ರವೇಶಿಸದಂತೆ ಹಿಂದೂಯೇತರರನ್ನು ನಿರ್ಬಂಧಿಸಲು ಕಡ್ಡಾಯ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿ ಕೋರಿತ್ತು.
ಮೊಕದ್ದಮೆಯನ್ನು ಪ್ರಾತಿನಿಧಿಕ ಸಾಮರ್ಥ್ಯದಲ್ಲಿ (ನಾಗರಿಕ ಪ್ರಕ್ರಿಯಾ ಸಂಹಿತೆಯ ಆದೇಶ 1 ನಿಯಮ 8ರ ಅಡಿಯಲ್ಲಿ) ಮುಂದುವರಿಸಲು ವಿಚಾರಣಾ ನ್ಯಾಯಾಲಯ ಈ ಹಿಂದೆ ಅನುಮತಿ ನೀಡಿತ್ತು, ಅದರ ನಿರ್ಧಾರವನ್ನು ಕಳೆದ ಆಗಸ್ಟ್‌ನಲ್ಲಿ ಜಿಲ್ಲಾ ನ್ಯಾಯಾಧೀಶರು ಎತ್ತಿಹಿಡಿದಿದ್ದರು. ಈ ಎರಡೂ ಆದೇಶಗಳನ್ನು ಮಸೀದಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಸೊಸೈಟಿಗಳ ನೋಂದಣಿ ಕಾಯಿದೆಯಡಿಯಲ್ಲಿ ನೋಂದಾಯಿತಗೊಂಡಿರುವ ಅರ್ಜಿದಾರ ಸಂಸ್ಥೆ ನ್ಯಾಯಿಕ ಪಕ್ಷಕಾರನಲ್ಲ. ಆದ್ದರಿಂದ ಪ್ರಾತಿನಿಧಿಕ ಸಾಮರ್ಥ್ಯದಲ್ಲಿ ಅರ್ಜಿ ಸಲ್ಲಿಸಲು ಕಾನೂನು ಅರ್ಹತೆ ಇಲ್ಲದಿರುವುದರಿಂದ ಹಿಂದೂ ಪರ ಅರ್ಜಿದಾರರ ಮೊಕದ್ದಮೆ ಮೂಲತಃ ದೋಷಪೂರಿತವಾಗಿದೆ. ಈ ರೀತಿಯ ವ್ಯಾಜ್ಯದಲ್ಲಿ ತೊಡಗಿಸಿಕೊಳ್ಳಲು ಸೊಸೈಟಿಯ ಬೈಲಾಗಳು ಕೂಡ ಅನುಮತಿಸುವುದಿಲ್ಲಎಂದು ಮಸೀದಿ ವಾದಿಸಿದೆ.
ಮಸೀದಿಯ ವಾದದ ಪ್ರಮುಖಾಂಶಗಳು
ಪೂರ್ವಾಂಚಲ್‌ನ ಹಿಂದೂಗಳನ್ನು ಪ್ರತಿನಿಧಿಸುವುದಾಗಿ ಫಿರ್ಯಾದಿದಾರರು ಮಂಡಿಸಿರುವ ವಾದ ಅಸ್ಪಷ್ಟವಾಗಿದೆ, ಏಕೆಂದರೆ 'ಪೂರ್ವಾಂಚಲ್' ಪದವನ್ನು ವ್ಯಾಖ್ಯಾನಿಸಲಾಗಿಲ್ಲ
ಮೂಲ ಪ್ರತಿವಾದಿಗಳ ವಿವರಣೆ ಅಸಂಬದ್ಧ ಮತ್ತು ಮೇಲ್ನೋಟಕ್ಕೆ ಅಸ್ಪಷ್ಟವಾಗಿದ್ದು ಪಿತೂರಿಯಿಂದ ಕೂಡಿದೆ.
ವಕ್ಫ್ ಮಂಡಳಿಯನ್ನು ಕೂಡ ಮೊಕದ್ದಮೆಯ ಕಕ್ಷಿದಾರರನ್ನಾಗಿ ಮಾಡದೆ ಇರುವುದು ಫಿರ್ಯಾದಿದಾರರ ಕಿಡಿಗೇಡತನವನ್ನು ಸಾರಿ ಹೇಳುತ್ತದೆ. ವಿಚಾರಣಾ ನ್ಯಾಯಾಲಯ ಮೊಕದ್ದಮೆಯ ಸೂಕ್ಷ್ಮ ಸ್ವರೂಪವನ್ನು ಗಮನಿಸದೆ ಯಾಂತ್ರಿಕವಾಗಿ ಫಿರ್ಯಾದಿದಾರರ ಕುಕೃತ್ಯವನ್ನು ಸುಗಮಗೊಳಿಸಿದೆ.
ಮೊಕದ್ದಮೆ ಹೂಡಲು ಅನರ್ಹವಾಗಿರುವ ಪಕ್ಷಕಾರರ ಪರವಾಗಿ ಪ್ರಕ್ರಿಯೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ.
ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.