ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿ ಪ್ರಕರಣದ ತನಿಖೆಯಾಗಬೇಕು ಎಂದು ಸಂತ್ರಸ್ತ ಯುವತಿ ಕೋರಿದ್ದಾರೆ. ಈ ಸಂಬಂಧ ಭಾನುವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಅವರಿಗೆ ಆಕೆ ಪತ್ರ ಬರೆದಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಖುದ್ದಾಗಿ ತನಿಖೆಯ ಉಸ್ತುವಾರಿ ವಹಿಸಬೇಕು. ಜೊತೆಗೆ ನನಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಯುವತಿ ಕೋರಿದ್ದಾರೆ. ನ್ಯಾಯಮೂರ್ತಿಗಳಿಗೆ ಯುವತಿ ಇಮೇಲ್ ಮೂಲಕ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
“ನಾನು ಕಿಡ್ನಾಪ್ ಆಗಿರುವುದಾಗಿ ನನ್ನ ಪೋಷಕರಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ನನಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ. ರಮೇಶ್ ಜಾರಕಿಹೊಳಿ ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುತ್ತಿದ್ದಾರೆ. ಅವರು ನನಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ಜಾರಕಿಹೊಳಿ ಅವರು ಯಾವುದೇ ಹೊತ್ತಿನಲ್ಲಿ ಯಾವುದೇ ಜಾಗದಲ್ಲಿಯಾದರೂ ಕೊಲ್ಲಬಹುದು. ಎಸ್‌ಐಟಿ ಜಾರಕಿಹೊಳಿ ಅವರು ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರ ಮಾಜಿ ಸಚಿವರನ್ನು ರಕ್ಷಿಸುತ್ತಿದೆ. ಎಸ್‌ಐಟಿ ಹಾಗೂ ಸರ್ಕಾರದ ಮೇಲೆ ನನಗೆ ನಂಬಿಕೆ ಇಲ್ಲ” ಎಂದು ಆಕೆ ಪತ್ರದಲ್ಲಿ ವಿವರಿಸಿದ್ದಾರೆ.
ಡಿವೈಎಸ್‌ಪಿ ಕಟ್ಟಿಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರು ಜಾರಕಿಹೊಳಿ ಪರ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯ ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಜೀವ ಭಯ ಇರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದಿದ್ದಾರೆ.
ಮತ್ತೊಂದೆಡೆ ಯುವತಿ ಪರ ವಕೀಲ ಕೆ ಎನ್ ಜಗದೀಶ್ ಕುಮಾರ್ ಅವರು “ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಯುವತಿಯ ಹೇಳಿಕೆಯನ್ನು ದಾಖಲಿಸಲು ಕೋರುತ್ತೇವೆ. ಯುವತಿಯನ್ನು ನ್ಯಾಯಾಲಯಕ್ಕೆ ಹಾಜರಿಪಡಿಸುವ ಸಲುವಾಗಿ ಸೂಕ್ತ ಭದ್ರತೆ ಒದಗಿಸುವಂತೆ ಡೆಪ್ಯೂಟಿ ರಿಜಿಸ್ಟ್ರಾರ್ ಅವರನ್ನು ಕೋರಿದ್ದೇವೆ” ಎಂದು ಹೇಳಿದ್ದಾರೆ.