ಪ್ರಸಕ್ತ ವರ್ಷದ ಪ್ರವೇಶಾತಿಗಾಗಿ ಪ್ರತ್ಯೇಕವಾಗಿ ರಾಷ್ಟ್ರೀಯ ಕಾನೂನು ಪ್ರವೇಶ ಪರೀಕ್ಷೆ (ಎನ್‌ಎಲ್‌ಎಟಿ) ನಡೆಸಲು ಉದ್ದೇಶಿಸಿರುವ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ ತನ್ನ ಆದೇಶ ಕಾಯ್ದಿರಿಸಿದೆ.
ನ್ಯಾಯಮೂರ್ತಿ ರಾಜೇಶ್ ಶಂಕರ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಇದಕ್ಕೂ ಮುನ್ನ ನ್ಯಾ. ಶಂಕರ್ ಅವರು ಅರ್ಜಿ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ನಡೆಸಬೇಕೆ ಎಂಬುದರ ಬಗ್ಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರು.
“ಜಾರ್ಖಂಡ್ ಹೈಕೋರ್ಟ್‌ನಲ್ಲೇಕೆ ಅರ್ಜಿ ಸಲ್ಲಿಸಲಾಗಿದೆ? ಪ್ರತಿ ರಾಜ್ಯದ ವಿದ್ಯಾರ್ಥಿಗಳು ತಮ್ಮತಮ್ಮ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ರಿಟ್ ಅರ್ಜಿ ಸಲ್ಲಿಸಿದರೆ ಏನು ಮಾಡುವುದು? ಒಂದು ಹೈಕೋರ್ಟ್ ಪರೀಕ್ಷೆಗೆ ತಡೆ ನೀಡಿ ಮತ್ತೊಂದು ಹೈಕೋರ್ಟ್ ಅರ್ಜಿ ವಜಾ ಮಾಡಿದರೆ ಏನು ಮಾಡುವುದು?.”
“ಎನ್‌ಎಲ್‌ಎಸ್‌ಐಯು ಮತ್ತು ಒಕ್ಕೂಟದ ಕಚೇರಿ ಕರ್ನಾಟಕದಲ್ಲಿವೆ. ಹೀಗಿರುವಾಗ ಜಾರ್ಖಂಡ್ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುವುದು ಹೇಗೆ?… ಪ್ರಕರಣವು ದೇಶಾದ್ಯಂತ ಪ್ರಭಾವ ಬೀರುತ್ತದೆ ಎನ್ನುವುದಾದರೂ ನಾವು ಹೇಗೆ ಅದನ್ನು ನಿರ್ಣಯಿಸುವುದು? ಎಂದು ನ್ಯಾಯಾಲಯ ಪ್ರಶ್ನಿಸಿತು.
ಎನ್‌ಎಲ್ಎಟಿ ಪ್ರಶ್ನಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ ಎಂದು ಜಾರ್ಖಂಡ್ ಹೈಕೋರ್ಟ್ ಅರ್ಜಿದಾರರಿಗೆ ಹೇಳಿತು. ಎನ್‌ಎಲ್‌ಎಸ್‌ಐಯು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರು ಎರಡೂ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಲಾಗಿಲ್ಲ ಎಂದರು.
“ಜಾರ್ಖಂಡ್ ಹೈಕೋರ್ಟ್ ವ್ಯಾಪ್ತಿಗೆ ಪ್ರಕರಣ ಬರುವುದಿಲ್ಲ ಎಂದಲ್ಲ. ಆದರೆ, ಇದು ಸರಿಯಾದ ವೇದಿಕೆಯಲ್ಲ ಎಂದು ತನ್ನ ನ್ಯಾಯವ್ಯಾಪ್ತಿಯನ್ನು ಚಲಾಯಿಸದೇ ಇರಬಹುದು” ಎಂದು ಪೂವಯ್ಯ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಶಂಕರ್ ಅವರು “ಈ ಪ್ರಕಣದಲ್ಲಿ (ಜಾರ್ಖಂಡ್ ಹೈಕೋರ್ಟ್) ಸೂಕ್ತ ವೇದಿಕೆಯಲ್ಲ ಎಂಬ ವಿಚಾರ ಪ್ರಮುಖವಾಗಿ ಬರುತ್ತದೆ… ವಿಭಿನ್ನ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದರೆ ಅದು ಸಮಸ್ಯೆಯನ್ನು ಕಠಿಣವಾಗಿಸಲಿದೆ” ಎಂದರು.
ಅರ್ಜಿದಾರರ ಪರವಾಗಿ ವಾದಕ್ಕಿಳಿದ ವಕೀಲ ಶುಭಮ್ ಗೌತಮ್ ಅವರು ಮೊದಲಿಗೆ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. “ದೇಶದಲ್ಲಿ ಸಲ್ಲಿಸಲಾದ ಮೊದಲ ಅರ್ಜಿ ಇದಾಗಿದೆ” ಎಂದರು.
“ಪರೀಕ್ಷೆಗೂ ಮುನ್ನ ಸುಪ್ರೀಂ ಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಪ್ರಕರಣ ವಿಚಾರಣೆಗೆ ಬರದಿದ್ದರೆ ಏನು ಮಾಡುವುದು? ಈ ಅಧಿಸೂಚನೆಯು ಸಿಎಲ್‌ಎಟಿ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.”
“ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿರುವ ಎನ್‌ಎಲ್‌ಎಸ್‌ಐಯು ತಾಂತ್ರಿಕ ಸಮಸ್ಯೆ, ಇಂಟರ್‌ನೆಟ್ ಸಮಸ್ಯೆ ಇತ್ಯಾದಿಗಳಿಗೆ ಎನ್‌ಎಲ್‌ಎಸ್‌ಐಯು ಜವಾಬ್ದಾರಿಯಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ, ಜಾರ್ಖಂಡ್‌ನಲ್ಲಿ ಅಂಥ ಯಾವುದೇ ಕೇಂದ್ರಗಳಿಲ್ಲ” ಎಂದು ವಾದಿಸಿದರು.
ಬಳಿಕ ಜಾರ್ಖಂಡ್‌ನ ಧನಬಾದ್‌ನಲ್ಲಿ ಎನ್‌ಎಲ್‌ಎಸ್ಐಯು ಪರೀಕ್ಷಾ ಕೇಂದ್ರ ಆರಂಭಿಸಿದೆ ಎಂದು ಮಾಹಿತಿ ನೀಡಲಾಯಿತು. ಇಂಟರ್‌ನೆಟ್ ಅವಶ್ಯಕತೆಯನ್ನು ಎನ್‌ಎಲ್‌ಎಸ್‌ಐಯು 512 ಕೆಬಿಪಿಎಸ್ ವೇಗಕ್ಕೆ ಕುಗ್ಗಿಸಿದೆ ಎಂದ ಪೂವಯ್ಯ ಅವರು ಕಂಪ್ಯೂಟರ್/ಇಂಟರ್‌ನೆಟ್ ವ್ಯವಸ್ಥೆಯಿಲ್ಲದ ವಿದ್ಯಾರ್ಥಿಗಳಿಗೆ ಐಡಿಐಎ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.
“ಪರೀಕ್ಷಾ ಮಾದರಿಯಲ್ಲಿ ಯಾವುದೇ ತೆರನಾದ ಬದಲಾವಣೆ ಮಾಡದೆ ಪ್ರಶ್ನೆಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದೇವೆ. ಕಾನೂನು ಯೋಗ್ಯತೆಯ ಮೂಲಕ ವಿದ್ಯಾರ್ಥಿಗಳನ್ನು ನಾವು ಪರೀಕ್ಷಿಸುವುದಿಲ್ಲ… 30,298 ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೆಲವೇ ಕೆಲವು ವಿದ್ಯಾರ್ಥಿಗಳು ಎನ್‌ಎಲ್‌ಎಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ” ಎಂದರು.
ಪರೀಕ್ಷೆ ಬರೆಯಲು ಜಾರ್ಖಂಡ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಪೂವಯ್ಯ ಅವರು “ವಿದ್ಯಾರ್ಥಿಗಳಿಗೆ ಸಮಸ್ಯೆ ಏನಾದರೂ ಆದರೆ ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆ ಬರೆಯಲು ಉತ್ಸುಕವಾಗಿರುವ ವಿದ್ಯಾರ್ಥಿಗಳಿಗೆ ವಕೀಲರು ತಮ್ಮ ಕಚೇರಿ ಬಿಟ್ಟುಕೊಡಲು ಸಿದ್ಧರಿದ್ದಾರೆ” ಎಂದರು.
"ಎನ್‌ಎಲ್‌ಎಟಿಯನ್ನು ಈ ವರ್ಷ ಮಾತ್ರ ನಡೆಸಲಾಗುತ್ತದೆಯೇ" ಎಂಬ ನ್ಯಾ. ಶಂಕರ್ ಅವರ ಪ್ರಶ್ನೆಗೆ ಈ ವರ್ಷ ಮಾತ್ರ ಪ್ರತ್ಯೇಕ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಎನ್‌ಎಲ್‌ಎಸ್‌ಐಯುನ ಕಾರ್ಯಕಾರಿ ಸಮಿತಿಯು ಮುಂದೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ ಎಂದು ಪೂವಯ್ಯ ಪ್ರತಿಕ್ರಿಯಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು “ಪ್ರಕರಣವು ದೇಶಾದ್ಯಂತ ಪ್ರಭಾವ ಬೀರುತ್ತದೆ ಎನ್ನುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ವ್ಯಾಪ್ತಿಯು ಪ್ರಮುಖ ವಿಚಾರವಾಗಿದೆ” ಎಂದಿತು.
ಬೆಂಗಳೂರಿನ ಎನ್‌ಎಲ್‌ಎಸ್‌ಐಯುವಿನಲ್ಲಿ ಪ್ರವೇಶ ಕಲ್ಪಿಸುವ ಸಂಬಂಧ ಸೆಪ್ಟೆಂಬರ್ 12ರಂದು ಎನ್‌ಎಲ್‌ಎಟಿ ನಡೆಸಲು ಹೊರಡಿಸಿರುವ ಅಧಿಸೂಚನೆಯನ್ನು ವಜಾಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.