Illegal Custody 
ಸುದ್ದಿಗಳು

ನಾಲ್ಕು ತಿಂಗಳು ಅಕ್ರಮ ಬಂಧನ: ವ್ಯಕ್ತಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಾರ್ಖಂಡ್ ಹೈಕೋರ್ಟ್ ತಾಕೀತು

"ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತುಸು ಜಾಗರೂಕರಾಗಿದ್ದರೆ ಅರ್ಜಿದಾರರು ಸ್ವಾತಂತ್ರ್ಯದಿಂದ ವಂಚಿತರಾಗುತ್ತಿರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

ನಾಲ್ಕು ತಿಂಗಳ ಕಾಲ ಕಾನೂನುಬಾಹಿರವಾಗಿ ಬಂಧನಕ್ಕೊಳಗಾದ ವ್ಯಕ್ತಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ ತಪ್ಪಿತಸ್ಥರೆಂದು ಸಾಬೀತಾಗದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಪ್ರಕರಣದಿಂದ ಮುಕ್ತಗೊಳಿಸಿದೆ [ಅಜಿತ್‌ ಕುಮಾರ್‌ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಸುಳ್ಳು ಪ್ರಕರಣದಲ್ಲಿ ಅರ್ಜಿದಾರರನ್ನು 2021ರ ಫೆಬ್ರವರಿಯಿಂದ ಜುಲೈವರೆಗೆ ಬಂಧಿಸಲಾಗಿತ್ತು. ಬಿಡುಗಡೆಯಾದ ನಂತರ ಅವರು ಅಚಾತುರ್ಯಕ್ಕೆ ಕಾರಣರಾದ ಪೊಲೀಸ್‌ ಅಧಿಕಾರಿಗಳು ಪರಿಹಾರ ನೀಡಬೇಕು ಮತ್ತು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅತ್ಯಾಚಾರ, ಕೊಲೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಅರ್ಜಿದಾರರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಒಪ್ಪಿಕೊಂಡಿದ್ದರಿಂದ, ಪರಿಹಾರಕ್ಕಾಗಿ ಅರ್ಜಿದಾರರಿಗೆ ಮಾನ್ಯವಾದ ಹಕ್ಕು ಇದೆ ಎಂದು ನ್ಯಾ. ಸಂಜಯ್‌ ಕುಮಾರ್‌ ದ್ವಿವೇದಿ ತಿಳಿಸಿದರು.

"ಅರ್ಜಿದಾರರನ್ನ ವಶಕ್ಕೆ ತೆಗೆದುಕೊಂಡಂತೆ ಅವರ ಮಾನವ ಹಕ್ಕುಗಳಿಗೆ ಮೂಲಭೂತ ಅಂಶಗಳಾಗಿರುವ ಸ್ವಾತಂತ್ರ್ಯ ಮತ್ತು ಘನತೆಗೆ ಧಕ್ಕೆಯುಂಟಾಯಿತು. ಅಂತಿಮವಾಗಿ ಅವರಿಗಿದ್ದ ಹಿಂದಿನ ಎಲ್ಲಾ ಘನತೆಯ ಹೊರತಾಗಿಯೂ ಅವರು ಸಿನಿಕತನದ ಅಸಹ್ಯ ಎದುರಿಸಬೇಕಾಯಿತು. ಜೀವಿಸುವ ಹಕ್ಕು, ಸ್ವಾಭಿಮಾನ ಮತ್ತು ಘನತೆಯನ್ನು ಉಳಿಸುವ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಕಲ್ಪಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿರುವುದಕ್ಕಾಗಿ ಸಾರ್ವಜನಿಕ ಕಾನೂನು ಪರಿಹಾರ ಒದಗಿಸಲು ಇದು ಕಾರಣವಾಯಿತು" ಎಂದು ಆದೇಶದಲ್ಲಿ ವಿವರಿಸಲಾಗಿದೆ.

"ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತುಸು ಜಾಗರೂಕರಾಗಿದ್ದರೆ ಅರ್ಜಿದಾರರು ಸ್ವಾತಂತ್ರ್ಯದಿಂದ ವಂಚಿತರಾಗುತ್ತಿರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಪರಿಹಾರದ ಮೊತ್ತವನ್ನು ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವೇತನದಿಂದ ಕಡಿತಗೊಳಿಸಬೇಕೆ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸೇನೆಗೆ ಸೇರುವ ಆಕಾಂಕ್ಷಿಯಾಗಿದ್ದ ಅರ್ಜಿದಾರನಿಗೆ ಬಂಧನಕ್ಕೂ ಮೊದಲು ಉಜ್ವಲ ಭವಿಷ್ಯವಿತ್ತು. ಆದರೆ ಪೊಲೀಸರ ನಿರ್ಲಕ್ಷ್ಯ ಧೋರಣೆಯಿಂದ ಅವರು ಅಪಮಾನ ಎದುರಿಸುವಂತಾಯಿತು ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.