Brij Bhushan Sharan Singh Facebook
ಸುದ್ದಿಗಳು

ಬ್ರಿಜ್‌ ಭೂಷಣ್‌ ವಿರುದ್ಧದ ಪೋಕ್ಸೋ ಪ್ರಕರಣ ರದ್ದು: ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿ ಸ್ವೀಕರಿಸಿದ ದೆಹಲಿ ನ್ಯಾಯಾಲಯ

ದೂರುದಾರೆ ಅಪ್ರಾಪ್ತೆ ಮತ್ತು ಆಕೆಯ ತಂದೆ ನ್ಯಾಯಾಲಯದ ಮುಂದೆ ಹಾಜರಾಗಿ ಪೊಲೀಸ್ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ಪ್ರಕರಣದ ರದ್ದತಿ ವರದಿಯನ್ನು ವಿರೋಧಿಸಿಲ್ಲ.

Bar & Bench

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವೊಬ್ಬರು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು (ಪೋಕ್ಸೋ) ರದ್ದುಗೊಳಿಸುವಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ದೆಹಲಿ ನ್ಯಾಯಾಲಯವು ಸ್ವೀಕರಿಸಿದೆ.

ಡಬ್ಲ್ಯೂಎಫ್‌ಐನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಮಾಜಿ ಸಂಸದ ಬ್ರಿಜ್‌ ಭೂಷಣ್‌ ವಿರುದ್ಧದ ಪ್ರಕರಣದ ಮುಕ್ತಾಯ ವರದಿಯನ್ನು ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ (ಎಎಸ್‌ಜೆ) ಗೋಮತಿ ಮನೋಚಾ ಅವರು ಸ್ವೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಈ ಕುರಿತು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಕುಸ್ತಿಪಟುವೊಬ್ಬರು ಸಿಂಗ್ ವಿರುದ್ಧ ಆರೋಪಗಳನ್ನು ಹೊರಿಸಿದ್ದರು, ಆದರೆ ನಂತರ ಅವುಗಳನ್ನು ಹಿಂಪಡೆದರು. ಪ್ರಕರಣದಲ್ಲಿ ಪೊಲೀಸರು ರದ್ದತಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ.

ದೂರುದಾರೆ ಅಪ್ರಾಪ್ತೆ ಮತ್ತು ಆಕೆಯ ತಂದೆ ನ್ಯಾಯಾಲಯದ ಮುಂದೆ ಹಾಜರಾಗಿ ಪೊಲೀಸ್ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ಪ್ರಕರಣದ ರದ್ದತಿ ವರದಿಯನ್ನು ವಿರೋಧಿಸಿಲ್ಲ.

ಈ ನಡುವೆ ಸಿಂಗ್ ವಿರುದ್ಧ ಮತ್ತೊಂದು ಪ್ರಕರಣ ಬಾಕಿ ಇದ್ದು, ಮಹಿಳಾ ಕುಸ್ತಿಪಟುಗಳ ಗುಂಪೊಂದು ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದೆ. ಆ ವಿಚಾರಣೆಯಲ್ಲಿ ಲೈಂಗಿಕ ಕಿರುಕುಳ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪಗಳನ್ನು ಸಿಂಗ್‌ ವಿರುದ್ಧ ಹೊರಿಸಲಾಗಿದೆ.