ಜೀರಂಘಾಟಿ ನಕ್ಸಲ್ ದಾಳಿ ಪ್ರಕರಣ, ಸುಪ್ರೀಂಕೋರ್ಟ್  
ಸುದ್ದಿಗಳು

ಜೀರಂಘಾಟಿ ನಕ್ಸಲ್ ದಾಳಿ ಪ್ರಕರಣ: ಹೆಚ್ಚುವರಿ ಸಾಕ್ಷಿಗಳ ವಿಚಾರಣೆಗಾಗಿ ಛತ್ತೀಸ್‌ಗಢ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾ

ಛತ್ತೀಸ್‌ಗಢದ ಜೀರಂ ಕಣಿವೆಯಲ್ಲಿ ಕಾಂಗ್ರೆಸ್ ನಾಯಕರ ಬೆಂಗಾವಲು ಪಡೆ ಮೇಲೆ 2013ರಲ್ಲಿ ನಕ್ಸಲರು ದಾಳಿ ನಡೆಸಿದ್ದರು. ದಾಳಿಯಲ್ಲಿ ಅಂದಿನ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನಂದಕುಮಾರ್ ಪಟೇಲ್ ಸೇರಿದಂತೆ 29 ಜನ ಸಾವನ್ನಪ್ಪಿದ್ದರು.

Bar & Bench

ಜೀರಂಘಾಟಿ ನಕ್ಸಲ್ ದಾಳಿ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ಕೋರಿ ಛತ್ತೀಸ್‌ಗಢ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. 2013 ಮೇ 25ರಂದು ಈ ದಾಳಿ ನಡೆದಿತ್ತು.

ಪ್ರಕರಣದ ಹೆಚ್ಚುವರಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲು ದಾಳಿಯ ತನಿಖೆಗಾಗಿ ಸ್ಥಾಪಿಸಲಾದ ನ್ಯಾಯಾಂಗ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯಸರ್ಕಾರ ಈ ಹಿಂದೆ ಛತ್ತೀಸ್‌ಗಢ ಹೈಕೋರ್ಟ್‌ ಮೊರೆ ಹೋಗಿತ್ತು. ಹೈಕೋರ್ಟ್ ಈ ಮನವಿಯನ್ನು ಪುರಸ್ಕರಿಸದ ಕಾರಣ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ನ್ಯಾಯಪೀಠ ಈಗ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಅಕ್ಟೋಬರ್ 2019ರ ನಂತರ ಯಾವುದೇ ಹೆಚ್ಚುವರಿ ಸಾಕ್ಷ್ಯಗಳನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಂಗ ಆಯೋಗ ಸ್ಪಷ್ಟಪಡಿರುವುದನ್ನು ನ್ಯಾಯಮೂರ್ತಿ ಭೂಷಣ್ ತಿಳಿಸಿದರು.

ಛತ್ತೀಸ್‌ಗಢ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “ಆಯೋಗವು ಇನ್ನೂ ಐದು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬಹುದು” ಎಂದು ಪಟ್ಟುಹಿಡಿದರು.

‘ಇದು ತುಂಬಾ ಮಹತ್ವದ ಘಟನೆ. ಅವರು ಐದು ಸಾಕ್ಷಿಗಳನ್ನು ಏಕೆ ಪರೀಕ್ಷಿಸಲು ಸಾಧ್ಯವಿಲ್ಲ? ಇದು ಕಲ್ಲಿನ ಮೆಲೆ ಕೆತ್ತಿಟ್ಟಂತಹ ವಿಚಾರವೇನೂ ಅಲ್ಲವಲ್ಲ,’ ಎಂದು ಕಾಲಮಿತಿ ಮುಗಿದಿರುವ ಕಾರಣವನ್ನು ನೀಡಿರುವ ಆಯೋಗದ ನಿಲುವನ್ನು ಪ್ರಶ್ನಿಸಿ ಅಭಿಷೇಕ್ ವಾದಿಸಿದರು.

ಯಾರನ್ನಾದರೂ ವಿಚಾರಣೆಗೊಳಪಡಿಸಲು ಬಯಸುವಿರಾ ಎಂದು ಆಯೋಗ ಈ ಹಿಂದೆ ಪ್ರಶ್ನಿಸಿದ್ದಾಗ ಯಾರೂ ಪ್ರತಿಕ್ರಿಯಿಸಿರಲಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, ‘ಈಗ ಹೇಗೆ ಸಾಕ್ಷಿಗಳನ್ನು ಪರೀಕ್ಷಿಸಬಹುದು? ಎಂದು ಪ್ರಶ್ನಿಸಿತು.

ಬಳಿಕ, ಮೇಲ್ಮನವಿ ವಜಾಗೊಳಿಸಿದ ನ್ಯಾಯಾಲಯ ಹೀಗೆ ಅಭಿಪ್ರಾಯವ್ಯಕ್ತಪಡಿಸಿತು:

"ಪರಿಣತ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕೆಂದು ನೀವು ಬಯಸಿದ್ದೀರಿ, ಆದರೆ ಆಯೋಗ ಅದಕ್ಕೆ ಸಮ್ಮತಿಸಿಲ್ಲ. ನೀವು ಆಯೋಗದ ಅಧಿಕಾರಾವಧಿಯನ್ನು ವಿಸ್ತರಿಸಿದ್ದಿರಬಹುದು ಆದರೆ ಅದು ಈಗಾಗಲೇ ವಿಚಾರಣೆಯನ್ನು ಅಂತ್ಯಗೊಳಿಸಿದೆ”.

ಮೇ 25, 2013 ರಂದು, ಬಸ್ತಾರ್ ಜಿಲ್ಲೆಯಲ್ಲಿರುವ ಜೀರಂ ಕಣಿವೆಯಲ್ಲಿ ಕಾಂಗ್ರೆಸ್ ನಾಯಕರ ಬೆಂಗಾವಲು ಪಡೆ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ದಾಳಿಯಲ್ಲಿ ಅಂದಿನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್, ಮಾಜಿ ವಿರೋಧ ಪಕ್ಷ ನಾಯಕ ಮಹೇಂದ್ರ ಕರ್ಮಾ, ಹಾಗೂ ಕೇಂದ್ರದ ಮಾಜಿ ಸಚಿವ ವಿದ್ಯಾಚರಣ್ ಶುಕ್ಲಾ ಸೇರಿದಂತೆ 29 ಜನರು ಹತ್ಯೆಗೀಡಾಗಿದ್ದರು.

ಸಿಂಘ್ವಿ ಮಂಡಿಸಿದ ವಾದದ ಸಾರ:

  • ಪರಿಣತ ಸಾಕ್ಷ್ಯ ನುಡಿಯಲು ಕಂಕರ್‌ನ ಜಂಗಲ್ ವಾರ್‌ಫೇರ್ ತರಬೇತಿ ಶಾಲೆಯ ನಿರ್ದೇಶಕ ಬಿ ಕೆ ಪೋನ್ವಾರ್ ಅವರನ್ನು ಕರೆಸಲು ಆಯೋಗ ನಿರಾಕರಿಸಿದೆ.

  • ಆರು ಸಾಕ್ಷಿಗಳಲ್ಲಿ ಯಾರನ್ನೂ ಆಯೋಗ ವಿಚಾರಣೆ ನಡೆಸಿಲ್ಲ.

  • ಹೆಚ್ಚುವರಿ ಸಾಕ್ಷ್ಯಗಳ ಬಗ್ಗೆ 2019ರ ಸೆಪ್ಟೆಂಬರಿನಲ್ಲೇ ಮಾಹಿತಿ ನೀಡಲಾಗಿತ್ತು.

  • ಆಯೋಗಕ್ಕೆ ಹೊಸದಾಗಿ ಹೆಚ್ಚುವರಿ ಪರಿಶೀಲನಾಂಶಗಳನ್ನು ನೀಡಲಾಗಿತ್ತು ಹಾಗೂ ಆಯೋಗವು ಅದನ್ನು ಒಪ್ಪಿತ್ತು.

  • ಹೀಗಿದ್ದರೂ ಹಳೆಯ ಸಾಕ್ಷ್ಯಗಳನ್ನಷ್ಟೇ ವಿಚಾರಣೆಗೆ ಒಳಪಡಿಸಲಾಯಿತು ಹೆಚ್ಚುವರಿ ಸಾಕ್ಷ್ಯಗಳನ್ನು ಪರಿಗಣಿಸಲಿಲ್ಲ.