ಪಾಕಿಸ್ತಾನ ಎಂಬುದು ಮೊಹಮ್ಮದ್ ಅಲಿ ಜಿನ್ನಾರವರ ರಾಜಕೀಯ ಸೃಷ್ಟಿಯಲ್ಲ ಬದಲಿಗೆ ಅದು ಭಾರತದಲ್ಲಿನ ವಸಾಹತುಶಾಹಿ ಆಳ್ವಿಕೆಯ ಅಂತಿಮ ಹಂತದಲ್ಲಿ ಬ್ರಿಟಿಷ್ ಸರ್ಕಾರ ಅನುಸರಿಸಿದ ಭೌಗೋಳಿಕ-ರಾಜಕೀಯ ತಂತ್ರದ ಫಲ ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ತಿಳಿಸಿದರು.
ರೂಪ ಪಬ್ಲಿಕೇಷನ್ಸ್ ಇಂಡಿಯಾ ಶುಕ್ರವಾರ ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಆಯೋಜಿಸಿದ್ದ ತಮ್ಮ 'ಕಲೋನೈಸೇಶನ್ ಕ್ರುಸೇಡ್ ಅಂಡ್ ಫ್ರೀಡಂ ಆಫ್ ಇಂಡಿಯಾ: ಎ ಸಾಗಾ ಆಫ್ ಮಾನ್ಸ್ಟ್ರಸ್ ಬ್ರಿಟಿಷ್ ಬಾರ್ಬರಿಸಂ ಅರೌಂಡ್ ದಿ ಗ್ಲೋಬ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
1946ರ ರಾಜಕೀಯ ಹಾಗೂ ಚುನಾವಣಾ ಪರಿಸ್ಥಿತಿಗಳು ಜಿನ್ನಾಗೆ ಸ್ವತಂತ್ರವಾಗಿ ಪಾಕಿಸ್ತಾನವನ್ನು ನಿರ್ಮಿಸುವ ಶಕ್ತಿ ಅಥವಾ ಅಧಿಕಾರ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎಂದ ಅವರು ಪಾಕಿಸ್ತಾನ ಎಂಬ ಹಿಟ್ಟನ್ನು ನಾದಿ ಕೇಕ್ ತಯಾರಿಸಿದವರು ಬ್ರಿಟಿಷರೇ ಆಗಿದ್ದರು ಎಂದು ಹೇಳಿದರು.
1946ರ ಪ್ರಾಂತೀಯ ಚುನಾವಣೆ ವೇಳೆ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಮುಸ್ಲಿಂ ಲೀಗ್‌ಗೆ ಉಪಖಂಡದೆಲ್ಲೆಡೆ ನಿರ್ಣಾಯಕ ಹಿಡಿತ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ನಿರ್ಮಾಣವನ್ನು ಸಂಪೂರ್ಣವಾಗಿ ಜಿನ್ನಾ ಅವರ ನಾಯಕತ್ವಕ್ಕೆ ಸೇರ್ಪಡೆ ಮಾಡುವುದು ಐತಿಹಾಸಿಕವಾಗಿ ದುರ್ಬಲ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಐರೋಪ್ಯ ವಸಾಹತುಶಾಹಿ ವಿಸ್ತರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಜನಾಂಗಹತ್ಯೆಗಳು ಇಪ್ಪತ್ತನೇ ಶತಮಾನದ ಸರ್ವಾಧಿಕಾರಿಗಳ ಕ್ರೌರ್ಯಕ್ಕಿಂತಲೂ ಭೀಕರವಾಗಿದ್ದವು. ಯೂರೋಪಿಯನ್ನರು ಮಾಡಿದ ವಿನಾಶ ಕನಿಷ್ಠ 100 (ಜರ್ಮನಿಯ ಸರ್ವಾಧಿಕಾರಿ) ಹಿಟ್ಲರ್‌ಗಳು ಮಾಡಿದ ಹಾನಿಗೂ ಮಿಗಿಲಾದುದು. ಇದೇ ಮಾದರಿಉಯ ಆದರೆ ಅದಕ್ಕೂ ತೀವ್ರವಾದ ಹಿಂಸಾಚಾರ ಆಫ್ರಿಕಾ ಮತ್ತು ಭಾರತದಲ್ಲಿ ನಡೆದಿತ್ತು ಎಂದು ಅವರು ನೆನೆದರು.
ಪುಸ್ತಕ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ವಸಾಹತುಶಾಹಿ ಅಧಿಕಾರ ಎಂಬುದು ವ್ಯವಸ್ಥೆ, ನಾಗರಿಕತೆ ಮತ್ತು ಆಡಳಿತ ಎಂಬ ನಿರೂಪಗಳ ಮೂಲಕ ತನ್ನ ಆಳ್ವಿಕೆಯನ್ನು ಹೇಗೆ ನ್ಯಾಯೀಕರಿಸಿಕೊಂಡಿತು ಎಂಬುದನ್ನು ಈ ಕೃತಿ ಪ್ರಶ್ನಿಸುತ್ತದೆ ಎಂದು ಹೇಳಿದರು.
ಸಾಮ್ರಾಜ್ಯಶಾಹಿ ಇತಿಹಾಸಗಳು ಜಯವನ್ನು ಜಯವೆಂದು ಒಪ್ಪಿಕೊಳ್ಳದೆ, ಅದನ್ನು ಆಡಳಿತಾತ್ಮಕ ಅವಶ್ಯಕತೆಯಂತೆ ಚಿತ್ರಿಸಿ, ಪುನರಾವರ್ತನೆಯ ಮೂಲಕ ವಾದಾತ್ಮಕ ದಾವೆಗಳನ್ನು ಸತ್ಯಗಳಾಗಿ ಪರಿವರ್ತಿಸಿದವು ಎಂದು ಅವರು ತಿಳಿಸಿದರು. ಭಾರತದ ವಸಾಹತು ಅನುಭವವನ್ನು ಆಫ್ರಿಕಾ, ಐರ್ಲೆಂಡ್ ಮತ್ತು ಅಮೆರಿಕದೊಂದಿಗೆ ಹೋಲಿಸಿ ಜಾಗತಿಕ ಚೌಕಟ್ಟಿನಲ್ಲಿ ವಿಶ್ಲೇಷಿಸಿರುವುದೇ ಈ ಕೃತಿಯ ಶಕ್ತಿ ಎಂದರು.
ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ ಇತಿಹಾಸವನ್ನು ಕೇವಲ ಘಟನೆಗಳ ಪಟ್ಟಿಯಾಗಿ ನೋಡದ ಈ ಕೃತಿ ಘಟನೆಗಳು ಏಕೆ ಮತ್ತು ಹೇಗೆ ನಡೆದವು ಎಂಬುದನ್ನು ಅರ್ಥಮಾಡಿಕೊಳ್ಳುವ ಶೋಧದ ರೀತಿ ಕಾಣುತ್ತದೆ. ವಸಾಹತುಮುಕ್ತಿಯ ಸಮಯದಲ್ಲಿ ವೈಯಕ್ತಿಕ ನಾಯಕರಿಗಿಂತಲೂ ವಿಶಾಲ ಭೌಗೋಳಿಕ-ರಾಜಕೀಯ ಶಕ್ತಿಗಳ ಪಾತ್ರವನ್ನು ಇದು ಮುಂದಿಟ್ಟು ತೋರಿಸುತ್ತದೆ ಎಂದರು. ನಿಜವಾದ ಖೈದ್- ಎ- ಆಜಮ್ (ರಾಷ್ಟ್ರ ಸಂಸ್ಥಾಪಕ) ಬ್ರಿಟಿಷ್ ಸರ್ಕಾರವೇ ಆಗಿತ್ತು ಎಂಬುದನ್ನು ಪುಸ್ತಕ ಬೆರಳು ಮಾಡುತ್ತದೆ ಎಂದು ವಿವರಿಸಿದರು.
ಈ ಕೃತಿ ಸಾಮ್ರಾಜ್ಯದ ಸಾಂತ್ವನದ ಭ್ರಮೆಯನ್ನು ಸೀಳಿಹಾಕುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟರು. ವಸಾಹತು ಆಳ್ವಿಕೆಯನ್ನು ಪ್ರಗತಿಯಾಗಿ ಚಿತ್ರಿಸಿ, ಅದರ ಹಿಂದೆ ನಡೆದ ಭಾರೀ ಹಿಂಸಾಚಾರ ಮತ್ತು ಶೋಷಣೆಯನ್ನು ಮುಚ್ಚಿಹಾಕಲಾಗಿತ್ತು. ವಿಭಜನೆಯನ್ನು ಅನಿವಾರ್ಯ ಧಾರ್ಮಿಕ ವಿಭಜನೆಯಾಗಿ ಅಲ್ಲದೆ, ಭೌಗೋಳಿಕ-ರಾಜಕೀಯ ಲೆಕ್ಕಾಚಾರದ ಫಲವಾಗಿ ಈ ಕೃತಿ ಚಿತ್ರಿಸುತ್ತದೆ ಎಂದರು. 1947ರ ನಂತರದ ಭಾರತೀಯ ದೃಷ್ಟಿಕೋನದಿಂದ ಇತಿಹಾಸವನ್ನು ನೋಡುವಲ್ಲಿ ಈ ಪುಸ್ತಕ ಮಹತ್ವದ್ದಾಗಿದ್ದು, ಇದನ್ನು ವಿಶೇಷವಾಗಿ ಬ್ರಿಟನ್ ಮಂದಿ ಕೂಡ ಓದಬೇಕು ಎಂದರು.