High Court of Jammu & Kashmir, Srinagar
High Court of Jammu & Kashmir, Srinagar 
ಸುದ್ದಿಗಳು

ವಕೀಲರ ಪರಿಷತ್ತಿನ ಸಂವಿಧಾನದಲ್ಲಿ ಕಾಶ್ಮೀರ ವಿವಾದಕ್ಕೆ ಅವಕಾಶವೇಕೆ?: ವಿವರಣೆ ಬಯಸಿದ ಸರ್ಕಾರ

Bar & Bench

“ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು” ಎಂಬ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ವಕೀಲರ ಪರಿಷತ್ತಿನ (ಜೆಕೆಎಚ್‌ಸಿಬಿಎ) ಸಂವಿಧಾನದ ಮೊದಲ ಉದ್ದೇಶವನ್ನು ಪರಿಷತ್ತಿನ ಧ್ಯೇಯೋದ್ದೇಶಗಳಲ್ಲಿ ಒಂದು ಎಂದು ಹೇಳಿರುವುದಕ್ಕೆ ವಿವರಣೆ ನೀಡುವಂತೆ ಸೂಚಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪರಿಷತ್ತಿಗೆ ನೋಟಿಸ್‌ ಜಾರಿಗೊಳಿಸಿದೆ.

ಪರಿಷತ್ತಿನ ನಿಲುವು ಸಂವಿಧಾನಕ್ಕೆ ಪೂರಕವಾಗಿಲ್ಲ ಎಂದು ಪರಿಷತ್ತಿನ ಅಧ್ಯಕ್ಷರು ಮತ್ತು ಪರಿಷತ್ತಿನ ಚುನಾವಣಾ ಸಮಿತಿಗೆ ಸೋಮವಾರ ಶ್ರೀನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೋಟಿಸ್‌ ಜಾರಿಗೊಳಿಸಿದ್ದರು. ಶ್ರೀನಗರದಲ್ಲಿರುವ ಪರಿಷತ್ತಿನ ಚುನಾವಣೆಯು ಮಂಗಳವಾರ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ ಸಂವಿಧಾನವು ಸರ್ಕಾರದ ಗಮನಕ್ಕೆ ಬಂದಿತ್ತು.

“..ಸಾರ್ವಜನಿಕರನ್ನು ವಿಶಾಲ ದೃಷ್ಟಿಯಲ್ಲಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಶಾಂತಿಯುತವಾಗಿ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದು; ಇದಕ್ಕಾಗಿ ಸೆಮಿನಾರ್‌, ಸಮಾವೇಶ, ಸದಸ್ಯರನ್ನೊಳಗೊಂಡ ನಿಯೋಗವನ್ನು ಭಾರತದ ಹೊರಕ್ಕೂ ಕರೆದೊಯ್ಯುವುದು, ಪರಿಷತ್ತಿನ ಉದ್ದೇಶಗಳನ್ನು ಹೊಂದಿರುವ ಸಂಸ್ಥೆಗಳು, ಘಟಕ ಅಥವಾ ಒಕ್ಕೂಟಗಳ ಸದಸ್ಯತ್ವ ಪಡೆಯುವುದು” ಎಂಬ ಅಂಶಗಳನ್ನು ಒಳಗೊಂಡಿದ್ದ ಮಾಧ್ಯಮ ಹೇಳಿಕೆಯು ಚುನಾವಣಾ ಅಧಿಕಾರಿಗಳಿಗೆ ದೊರೆತಿದ್ದು, ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದರು.

“ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ವಿವಾದವಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನಕ್ಕೆ ಪೂರಕವಾಗಿಲ್ಲದ ಈ ವಿಚಾರದ ಬಗ್ಗೆ ತಮ್ಮ ನಿಲುವನ್ನು ವಿವರಿಸಬೇಕು. ಇದು ಆಡಳಿತ ಮತ್ತು ಕಾನೂನು ಅಂಶಗಳ ದೃಷ್ಟಿಯಿಂದ ವಕೀಲರ ಕಾಯಿದೆ 1961ರ ಜೊತೆ ಸಂಘರ್ಷ ಮೂಡಿಸುವಂತಿದೆ.”
ಶ್ರೀನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್‌

ಇದರ ಜೊತೆಗೆ ವಕೀಲರ ಪರಿಷತ್ತಿನ ನೋಂದಾಯಿತ ದಾಖಲಾತಿ, ಸಂಸ್ಥೆಗೆ ಸಂಬಂಧಿಸಿದ ಪರಿಕರಗಳು, ನೋಂದಾಯಿತ ಕಚೇರಿಯ ವಿಳಾಸ ಮತ್ತು ಕಾರ್ಯನಿರ್ವಹಣಾ ಸಮಿತಿಯ ಬಗೆಗಿನ ಮಾಹಿತಿ ಹಾಗೂ ಇತರೆ ವಿವರಣೆ ನೀಡುವಂತೆ ಪರಿಷತ್‌ಗೆ ಸರ್ಕಾರ ಸೂಚಿಸಿದೆ.

“ಎಲ್ಲಾ ವಿಚಾರಗಳನ್ನು ಪರಿಗಣಿಸಿ… ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯಂಥ ಗಂಭೀರ ವಿಚಾರಕ್ಕೆ ಸಂಬಂಧಿಸಿದಂತೆ ಜೆಕೆಎಚ್‌ಸಿಬಿಎ ಪ್ರತಿಕ್ರಿಯೆಯ ಅನುಪಸ್ಥಿತಿಯಲ್ಲಿ, ತನ್ನ ನಿಲುವನ್ನು ಪರಿಷತ್‌ ಸ್ಪಷ್ಟಪಡಿಸುವವರೆಗೆ ಜೆಕೆಎಚ್‌ಸಿಬಿಎ ಚುನಾವಣೆ ನಡೆಸಲು ಅನುಮತಿ ನಿರಾಕರಿಸಲಾಗಿದೆ” ಎಂದು ಸರ್ಕಾರ ಹೇಳಿದೆ.

ಚುನಾವಣೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಪರಿಷತ್‌ ಹೇಳಿರುವುದಾಗಿ ಮಂಗಳವಾರ ವರದಿಯಾಗಿದೆ. ಶ್ರೀನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವ್ಯಾಪ್ತಿಯಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 144ರ ಅಡಿ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿಗೊಳಿಸಿದೆ.