Joshimath cracks and Supreme Court
Joshimath cracks and Supreme Court  
ಸುದ್ದಿಗಳು

ಜೋಶಿಮಠ ಮುಳುಗಡೆ: ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರಕ್ಕಾಗಿ ಹೇಳಿಕೆ ನೀಡದಂತೆ ಅರ್ಜಿದಾರರಿಗೆ ಸುಪ್ರೀಂ ತಾಕೀತು

Bar & Bench

ಉತ್ತರಾಖಂಡದ ಜೋಶಿಮಠದಲ್ಲಿ ಮನೆ ಮತ್ತು ರಸ್ತೆಗಳು ಬಿರುಕು ಬಿಟ್ಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ವಿಲೇವಾರಿ ಮಾಡಿದೆ [ಜಗದ್ಗುರು ಶಂಕರಾಚಾರ್ಯ ಜ್ಯೋತಿರ್ಮಠ ಜ್ಯೋತಿಷ್ಪೀಠಾಧೀಶ್ವರ ಶ್ರೀ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಜೀ ಮಹಾರಾಜ್‌ ಅಂಜನೀ ಕುಮಾರ್‌ ಮಿಶ್ರಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಉತ್ತರಾಖಂಡ ಹೈಕೋರ್ಟ್‌ ನಡೆಸಬೇಕಿದ್ದ ವಿಚಾರಣೆಯನ್ನು ತಾನು ಕಸಿದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಇಲ್ಲವೇ ಅಲ್ಲಿನ ವಿಚಾರಣೆ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು ಕೋರಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಅದು ಸಲಹೆ ನೀಡಿತು.

ಜನರು ಸಾಯಲಿದ್ದು ಪುನರ್ವಸತಿ ಅಗತ್ಯವಿದೆ ಎಂದು ಅರ್ಜಿದಾರರ ವಕೀಲರು ಕೋರಿದರು. ಆಗ ಸಿಜೆಐ “ದಯವಿಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ದೊರೆಯುವ ಪ್ರಚಾರಕ್ಕಾಗಿ ಹೇಳಿಕೆ ನೀಡದಿರಿ. ನೀವು ಮಾಡಿದ ಪ್ರಾರ್ಥನೆಗಳು ಸಂವಿಧಾನದ 226ನೇ ವಿಧಿಯ ವ್ಯಾಪ್ತಿಯೊಳಗೆ ಬರುವುದಿಲ್ಲವೇ? ಮಿಗಿಲಾಗಿ ನೀವು ಹೆಚ್ಚುವರಿಯಾಗಿ ಏನನ್ನಾದರೂ ಹೇಳಬೇಕಿದ್ದರೆ ಹೈಕೋರ್ಟ್‌ ಸಂಪರ್ಕಿಸಲು ನಿಮಗೆ ಸ್ವಾತಂತ್ರ್ಯ ಇದೆ. ನಾವೇನಾದರೂ ವಿಚಾರಣೆ ಆರಂಭಿಸಿದರೆ ಪ್ರಕರಣದ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಇರುವ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.

ಅರ್ಜಿಯಲ್ಲಿ ಮಂಡಿಸಲಾದ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಕ್ರಮ ಕೈಗೊಂಡಿದೆ ಎಂದು ಉತ್ತರಾಖಂಡ ಸರ್ಕಾರದ ಪರ ವಕೀಲರು ಹೇಳಿದರು.

ಅರ್ಜಿಯಲ್ಲಿನ ವಾದಗಳ ಮೇಲೆ ರಾಜ್ಯ ಕ್ರಮ ಕೈಗೊಂಡಿದೆ ಎಂದು ಉತ್ತರಾಖಂಡ ಸರ್ಕಾರದ ಪರ ವಕೀಲರು ಇಂದು ಗಮನ ಸೆಳೆದರು. ಆದರೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಬಿರುಕು ಬಿಟ್ಟಿರುವ ಮನೆಗಳಿಗೇ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ದೂರಿದರು.

ಆಗ ಸುಪ್ರೀಂ ಕೋರ್ಟ್‌ “ಜೋಶಿಮಠ ಪ್ರದೇಶದಲ್ಲಿ ನಿರ್ಮಾಣ ಕಾರ್ಯಕ್ಕೆ ಹೇರಿರುವ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯಕ್ಕೆ ಸೂಚಿಸಲಾಗಿದೆ. ಸಂವಿಧಾನದ 32ನೇ ವಿಧಿಯಡಿ ಕೋರಿದ ಪರಿಹಾರ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಗಣನೀಯವಾಗಿ ಅತಿಕ್ರಮಿಸುತ್ತದೆ, ಅರ್ಜಿದಾರರು ಈಗ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಬಹುದು ಅಥವಾ ಹೊಸದಾಗಿ ಮನವಿ ಸಲ್ಲಿಸಬಹುದು. ನೀವು ಸಲ್ಲಿಸುವ ಅರ್ಜಿಯನ್ನು ಸಮಂಜಸವಾಗಿ ಪರಿಗಣಿಸುವಂತೆ ನಾವು ಹೈಕೋರ್ಟ್‌ಗೆ ಕೇಳಿಕೊಳ್ಳುತ್ತೇವೆ ”ಎಂದು ಸುಪ್ರೀಂ ಕೋರ್ಟ್ ತಿಳಿಸಿತು.