CJI NV Ramana
CJI NV Ramana 
ಸುದ್ದಿಗಳು

ಉತ್ಕೃಷ್ಟ ಸುದ್ದಿ ಪ್ರಕಟವಾಗದೆ ತಿರಸ್ಕೃತವಾದಾಗ ಪತ್ರಕರ್ತರು ಎದೆಗುಂದುತ್ತಾರೆ, ಅವಿಶ್ವಾಸ ಹೊಂದುತ್ತಾರೆ: ಸಿಜೆಐ

Bar & Bench

ಪತ್ರಕರ್ತರು ಶ್ರಮವಹಿಸಿ ತಂದ ಸುದ್ದಿಯನ್ನು ಅವರು ಕೆಲಸ ಮಾಡುವ ಮಾಧ್ಯಮ ಸಂಸ್ಥೆ ಪ್ರಕಟಿಸದೆ ಇದ್ದಾಗ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮಂಗಳವಾರ ಹೇಳಿದರು.

ʼರಾಜಸ್ಥಾನ್‌ ಪತ್ರಿಕಾʼ ಮುಖ್ಯ ಸಂಪಾದಕ ಹಾಗೂ ಲೇಖಕ ಗುಲಾಬ್‌ ಕೊಠಾರಿ ಅವರು ರಚಿಸಿರುವ ‘ಗೀತ ವಿಜ್ಞಾನ ಉಪನಿಷತ್‌ʼ ಕೃತಿಯನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಕೀಲ ವೃತ್ತಿ ಪ್ರವೇಶಿಸುವ ಮೊದಲು ಕೆಲಕಾಲ ಪತ್ರಕರ್ತರಾಗಿದ್ದ ಸಿಜೆಐ, ಪ್ರಜಾಪ್ರಭುತ್ವದ ಬೆನ್ನೆಲುಬಾಗಿ ಮುಕ್ತ ಪತ್ರಿಕೋದ್ಯಮದ ಮಹತ್ವವನ್ನು ಒತ್ತಿ ಹೇಳಿದರು. ಪತ್ರಕರ್ತರು ಜನರ ಕಣ್ಣು ಮತ್ತು ಕಿವಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ವಾಸ್ತವಾಂಶಗಳನ್ನು ಪ್ರಕಟಿಸುವುದು ಮಾಧ್ಯಮ ಸಂಸ್ಥೆಗಳ ಹೊಣೆ. ಭಾರತೀಯ ಸಮಾಜ ಪತ್ರಿಕೆಗಳಲ್ಲಿ ಬಂದದ್ದನ್ನು ನಿಜವೆಂದು ನಂಬುತ್ತಾರೆ. ನಾನು ಹೇಳುವುದಿಷ್ಟೇ, ತಮ್ಮ ಪ್ರಭಾವ ಮತ್ತು ವ್ಯಾಪಾರ ಹಿತಾಸಕ್ತಿಗಳನ್ನು ವಿಸ್ತರಿಸಲು ಮಾಧ್ಯಮಗಳು ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳದೆ ಪ್ರಾಮಾಣಿಕ ಪತ್ರಿಕೋದ್ಯಮ ನಡೆಸಬೇಕು” ಎಂದರು.

“ದುರದೃಷ್ಟವಶಾತ್‌ ಪುಲಿಟ್ಜರ್‌ ರೀತಿಯ ಪ್ರಶಸ್ತಿಗಳು ನಮ್ಮಲ್ಲಿಲ್ಲ. ಅಥವಾ ಭಾರತದಲ್ಲಿ ಪುಲಿಟ್ಜರ್‌ ಪ್ರಶಸ್ತಿ ಪಡೆಯುವಂತಹ ಪತ್ರಕರ್ತರನ್ನು ರೂಪಿಸುತ್ತಿಲ್ಲ. ನಮ್ಮ ಮಾನದಂಡಗಳನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಏಕೆ ಉತ್ತಮ ಎಂದು ಪರಿಗಣಿಸುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಎಲ್ಲಾ ಪಾಲುದಾರರನ್ನು ಒತ್ತಾಯಿಸುತ್ತೇನೆ” ಎಂದರು.

ನಾವು ಓದುವುದರ ಕುರಿತು ವಿಮರ್ಶಾತ್ಮಕವಾಗಿ ತೊಡಗಿಕೊಳ್ಳಬೇಕು. ನಾವು ಓದುವ ಪುಸ್ತಕಗಳು, ಅವುಗಳನ್ನು ಬರೆಯುವ ಜನರನ್ನು ಪ್ರಶ್ನಿಸುವುದು ಮತ್ತು ನಮಗೆ ಎದುರಾಗುವ ಮಾಹಿತಿಯನ್ನು ಕುರುಡಾಗಿ ಸ್ವೀಕರಿಸಲು ನಿರಾಕರಿಸುವುದು ಎಲ್ಲರಿಗೂ ಮುಖ್ಯವಾಗಿದೆ” ಎಂದು ತಿಳಿಸಿದರು.

"ದೇಶದ ಆರೋಗ್ಯಕರ ಅಭಿವೃದ್ಧಿಗೆ ಉತ್ತಮ ತಿಳಿವಳಿಕೆಯುಳ್ಳ, ವೈಚಾರಿಕ ನಾಗರಿಕರು ನಿರ್ಣಾಯಕವಾಗುತ್ತಾರೆ" ಎಂದು ಸಿಜೆಐ ಒತ್ತಿ ಹೇಳಿದರು.