Supreme Court of India 
ಸುದ್ದಿಗಳು

ತನಗೆ ಬೇಕಾದವರನ್ನು ಕೊಲಿಜಿಯಂ ಒಪ್ಪಲಿಲ್ಲವೆಂದು ಕೇಂದ್ರವು ನ್ಯಾಯಮೂರ್ತಿಗಳ ಪದೋನ್ನತಿ ನಿರ್ಬಂಧಿಸುವಂತಿಲ್ಲ: ಸುಪ್ರೀಂ

ನ್ಯಾಯಮೂರ್ತಿಗಳ ನೇಮಕಾತಿ ವೇಳೆ ಕೇಂದ್ರವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ ಕೆಲವನ್ನು ಮಾತ್ರವೇ ಆಯ್ದು ಪ್ರಕ್ರಿಯೆಗೆ ಒಳಪಡಿಸುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಇದರಿಂದ ಹಿರಿತನಕ್ಕೆ ಧಕ್ಕೆ ಒದಗುತ್ತದೆ ಎಂದಿತು.

Bar & Bench

ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದ ಹೆಸರುಗಳನ್ನು ಕೊಲಿಜಿಯಂ ಒಪ್ಪಲಿಲ್ಲ ಎಂದು ನ್ಯಾಯಮೂರ್ತಿಗಳ ಪದೋನ್ನತಿಯನ್ನು ಕೇಂದ್ರ ನಿರ್ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಎಚ್ಚರಿಕೆ ನೀಡಿದೆ [ಬೆಂಗಳೂರು ವಕೀಲರ ಸಂಘ ಮತ್ತು ಬರೂನ್‌ ಮಿತ್ರ ಇನ್ನಿತರರ ನಡುವಣ ಪ್ರಕರಣ].

ಕೊಲಿಜಿಯಂ ನ್ಯಾಯಮೂರ್ತಿಗಳ ಹೆಸರನ್ನು ಒಪ್ಪದಿದ್ದರೆ ಅಲ್ಲಿಗೆ ಆ ವಿಚಾರ ಮುಗಿಯಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿತು.

ಕೇಂದ್ರ ಸರ್ಕಾರ ಕೆಲ ನ್ಯಾಯಮೂರ್ತಿಗಳ ಹೆಸರನ್ನು ಅಂತಿಮಗೊಳಿಸಿದ್ದು ಅದಕ್ಕೆ ಕೊಲಿಜಿಯಂ ಒಪ್ಪಿಗೆ ನೀಡಲಿಲ್ಲ ಎಂದು ಭಾವಿಸೋಣ. ಅಲ್ಲಿಗೆ ಆ ಅಧ್ಯಾಯ ಮುಗಿಯಬೇಕು. ಯಾರಾದರೂ ನ್ಯಾಯಮೂರ್ತಿಯಾಗುವ ನಿರೀಕ್ಷೆಯಲ್ಲಿದ್ದು ಅದನ್ನು ಕೊಲಿಜಿಯಂ ಅಂತಿಮಗೊಳಿಸದಿದ್ದರೆ ಅದು ಅಲ್ಲಿಗೆ ಅಂತ್ಯವಾಗಬೇಕು. ಹಲವು ಪ್ರಕರಣಗಳಲ್ಲಿ ಈ ರೀತಿ ಆಗಿದೆ. ಆದರೆ, ಇದು ಬೇರೆಯವರ ಹೆಸರನ್ನು ಸ್ಥಗಿತಗೊಳಿಸಲು ನೆಪವಾಗಬಾರದು. ಇಲ್ಲದಿದ್ದರೆ ಅದು ಅಲ್ಲಿಯೇ ಸುತ್ತುತ್ತಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ತನಗೆ ಬೇಕಾದವರನ್ನು ನೇಮಿಸುವ ವಿಧಾನ ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಇದರಿಂದ ನ್ಯಾಯಮೂರ್ತಿಗಳ ಹಿರಿತನಕ್ಕೆ ಧಕ್ಕೆ ಒದಗುತ್ತದೆ ಎಂದಿತು.

ಕೊಲಿಜಿಯಂ ಅಥವಾ ಸುಪ್ರೀಂ ಕೋರ್ಟ್  ತಾನು ಜೀರ್ಣಿಸಿಕೊಳ್ಳಲಾಗದಂತಹ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಬರಬಾರದು ಎಂದು ಎಚ್ಚರಿಕೆ ನೀಡಿದೆ.

ಗುಪ್ತಚರ ವರದಿ ಅಥವಾ ಸರ್ಕಾರದ ಪ್ರತಿಕೂಲ ಮಾಹಿತಿಯಿಂದಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ ಹೆಸರುಗಳಲ್ಲಿ ಶೇ 50ರಷ್ಟು ಹೆಸರುಗಳನ್ನು ಕೂಡ ಸರ್ಕಾರ ಅಂತಿಮಗೊಳಿಸುತ್ತಿಲ್ಲ. ಆಯ್ದು ಪ್ರಕ್ರಿಯೆಗೆ ಒಳಪಡಿಸುವ ವಿಧಾನ ಬಹಳಷ್ಟು ತೊಂದರೆ ಸೃಷ್ಟಿಸಲಿದ್ದು ಹಿರಿಯರನ್ನು ಕೈಬಿಡಲಾಗುತ್ತದೆ ಎಂದು  ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಮೂರ್ತಿ ಕೌಲ್ ತಿಳಿಸಿದರು.

ಕೇಂದ್ರ ಸರ್ಕಾರವು ಹಿರಿತನವನ್ನು ಹೀಗೆ ಕದಡುವುದರಿಂದ ಯುವವಕೀಲರನ್ನು ನ್ಯಾಯಾಧೀಶರ ಹುದ್ದೆಗಳತ್ತ ಸೆಳೆಯಲು ಸಮಸ್ಯೆಯಾಗುತ್ತದೆ ಎಂದು ಪೀಠವು ವಿಚಾರಣೆಯ ಒಂದು ಹಂತದಲ್ಲಿ ಬೇಸರಿಸಿತು.

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ನವೆಂಬರ್ 20 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.