Judge P N Desai
Judge P N Desai 
ಸುದ್ದಿಗಳು

2,880 ಸಿವಿಲ್, ಕ್ರಿಮಿನಲ್ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾ. ಪಿ ಎನ್‌ ದೇಸಾಯಿ ಅವರಿಗೆ ಬೀಳ್ಕೊಡುಗೆ

Bar & Bench

ಮುಂದಿನ ತಿಂಗಳು ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರಿಗೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.

ಕರ್ನಾಟಕ ವಕೀಲರ ಪರಿಷತ್ ವತಿಯಿಂದ ಶುಕ್ರವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಕೋರ್ಟ್ ಹಾಲ್‌ 1ರಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ನ್ಯಾ. ಪಿ ಎನ್ ದೇಸಾಯಿ ಅವರು ವಕೀಲರ ಕುಟುಂಬದಿಂದ ಬಂದವರು. ಅವರ ತಂದೆ, ಸಹೋದರ ಮತ್ತು ಸಹೋದರಿಯರು ಸ್ವತಃ ವಕೀಲರಾಗಿದ್ದಾರೆ. 1992ರಲ್ಲಿ ಮುನ್ಸಿಫ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾಗಿ ನೇಮಕಗೊಂಡು ನ್ಯಾ.ದೇಸಾಯಿ ಅವರು 2020ರಲ್ಲಿ ಹೈಕೋರ್ಟ್‌ಗೆ ಪದೋನ್ನತಿ ಪಡೆದರು. ಒಂದು ವರ್ಷ ಆರು ತಿಂಗಳ ಕಿರು ಸೇವಾವಧಿಯಲ್ಲಿ ಒಟ್ಟು 2,880 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಇತ್ಯರ್ಥಪಡಿಸಿ, ಅನೇಕ ಪ್ರಮುಖ ತೀರ್ಪು ನೀಡಿದ್ದಾರೆ. ನಿವೃತ್ತಿಯ ನಂತರವೂ ಅವರ ಸೇವೆ ನ್ಯಾಯಾಂಗ ಕ್ಷೇತ್ರಕ್ಕೆ ಲಭಿಸಲಿ ಹಾಗೂ ನಿವೃತ್ತಿ ಜೀವನ ಸುಖಕರವಾಗಿರಲಿ” ಎಂದು ಹಾರೈಸಿದರು.

ಕರ್ನಾಟಕ ವಕೀಲ ಪರಿಷತ್ ಅಧ್ಯಕ್ಷ ಎಚ್ ಎಲ್ ವಿಶಾಲ್ ರಘು ಅವರು ಮಾತನಾಡಿ “ಕೆಳ ಹಂತದ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಪದೋನ್ನತಿ ಪಡೆದ ನ್ಯಾ.ದೇಸಾಯಿ ಅವರು ನ್ಯಾಯಾಂಗ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ನಿವೃತ್ತಿ ಜೀವನ ನೆಮ್ಮದಿಯಿಂದ ಕೂಡಿರಲಿ” ಎಂದು ಶುಭ ಕೋರಿದರು.

ನ್ಯಾ.ಪಿ ಎನ್ ದೇಸಾಯಿ ಅವರು ಧಾರವಾಡದ ನವಲಗುಂದದಲ್ಲಿ 1961ರ ಮೇ 21ರಂದು ಜನಿಸಿದರು. 1984ರಲ್ಲಿ ಕಾನೂನು ಪೂರೈಸಿ, ತಮ್ಮ ತಂದೆ ಎನ್ ಜೆ ದೇಸಾಯಿ ಅವರ ಕಚೇರಿಯಲ್ಲಿಯೇ ಕಿರಿಯ ವಕೀಲರಾಗಿ ಸೇರಿ ವೃತ್ತಿ ಜೀವನ ಆರಂಭಿಸಿದರು. ಕ್ರಿಮಿನಲ್ ಮತ್ತು ಸಿವಿಲ್ ಕಾನೂನುಗಳಲ್ಲಿ ಪರಿಣಿತ ಪಡೆದಿದ್ದ ಅವರು, 1992ರಲ್ಲಿ ಮುನ್ಸಿಫ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾಗಿ ನೇಮಕಗೊಂಡರು. 2002ರಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು. 2020ರ ಮೇ 4ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಅವರನ್ನು 2021ರ ಸೆಪ್ಟೆಂಬರ್‌ 25ರಂದು ಕಾಯಂಗೊಳಿಸಲಾಯಿತು. ನ್ಯಾ. ದೇಸಾಯಿ ಅವರು 2023ರ ಮೇ 20ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಶನಿವಾರದಿಂದ ಹೈಕೋರ್ಟ್‌ಗೆ ಬೇಸಿಗೆ ರಜೆ ಇರಲಿದ್ದು, ಶುಕ್ರವಾರ ಕೆಲಸದ ಕೊನೆ ದಿನವಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.