ಜಾರ್ಖಂಡ್ ರಾಜಧಾನಿ ರಾಂಚಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿನ (ಎಫ್‌ಎಸ್‌ಎಲ್) ಗತಕಾಲದ ಸೌಲಭ್ಯಗಳ ಬಗ್ಗೆ ಜಾರ್ಖಂಡ್ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಸೌಲಭ್ಯಗಳ ಕೊರತೆಯಿಂದಾಗಿ ರಾಂಚಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನ್ಯಾ. ಉತ್ತಮ್ ಆನಂದ್ ಅವರನ್ನು ಕೊಲೆಗೈದ ಆರೋಪಿಗಳ ಮೂತ್ರ ಮತ್ತು ರಕ್ತ ಪರೀಕ್ಷೆ ನಡೆಸಲಾಗಿಲ್ಲ. ಇಂಥ ಮೂಲ ಪರೀಕ್ಷೆಗಳನ್ನು ನಡೆಸಲಾಗಲಿಲ್ಲ ಎಂದ ಮೇಲೆ ಎಫ್‌ಎಸ್‌ಎಲ್‌ನ ಉಪಯೋಗವಾದರೂ ಏನು ಎಂದು ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣನ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಕೇಳಿದೆ.
“ಜಾರ್ಖಂಡ್ ರಾಜಧಾನಿಯಾದ ರಾಂಚಿಯ ಎಫ್‌ಎಸ್‌ಎಲ್‌ನಲ್ಲಿ ಆರೋಪಿಗಳ ಮೂತ್ರ ಮತ್ತು ರಕ್ತ ಪರೀಕ್ಷಾ ಸೌಲಭ್ಯಗಳು ಇಲ್ಲವೆಂದಾರೆ ಆ ಇಲಾಖೆಯಾದರೂ ಯಾವ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದೆ? ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಜಾರ್ಖಂಡ್ ರಾಜ್ಯವಾಗಿ ಇಪ್ಪತ್ತು ವರ್ಷಗಳಾದರೂ ಎಫ್‌ಎಸ್‌ಎಲ್ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ” ಎಂದು ನ್ಯಾಯಾಲಯದ ಆದೇಶದಲ್ಲಿ ವಿವರಿಸಲಾಗಿದೆ.
ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಜಾರ್ಖಂಡ್ ಸರ್ಕಾರದ ಗೃಹ, ಬಂಧೀಖಾನೆ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಂಚಿ ಎಫ್‌ಎಸ್‌ಎಲ್ ನಿರ್ದೇಶಕರು ಉಪಸ್ಥಿತರಿರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾ. ಉತ್ತಮ್ ಆನಂದ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ರಾಂಚಿಯ ಎಫ್‌ಎಸ್‌ಎಲ್‌ನಲ್ಲಿ ಮೂತ್ರ ಮತ್ತು ರಕ್ತ ಪರೀಕ್ಷೆ ನಡೆಸುವ ಸೌಲಭ್ಯ ಇಲ್ಲದೇ ಇರುವುದರಿಂದ ರಕ್ತ ಮತ್ತು ಮೂತ್ರದ ಮಾದರಿಯನ್ನು ದೆಹಲಿಯ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ವಿವರಿಸಿದಾಗ ಪೀಠವು ಮೇಲಿನಂತೆ ಹೇಳಿದೆ.
ಧನ್‌ಬಾದ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರ ಕೊಲೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಮೇಲಿನ ಹೇಳಿಕೆ ದಾಖಲಿಸಲಾಗಿದೆ. ನ್ಯಾ. ಆನಂದ್ ಅವರ ಪ್ರಕರಣವನ್ನು ಉಡಾಫೆಯಿಂದ ಪರಿಗಣಿಸಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯವು ವೈದ್ಯರು ಅಥವಾ ಆಸ್ಪತ್ರೆ ಆಡಳಿತ ಅಥವಾ ಪೊಲೀಸರು ಏಕೆ ಇಷ್ಟು ತಾತ್ಸಾರ ಹೊಂದಿದ್ದಾರೆ. ಅವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದೆ.
ಇಡೀ ದೇಶದಲ್ಲಿ ನ್ಯಾಯಿಕ ಅಧಿಕಾರಿಗಳ ಭದ್ರತೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದು, ಎಲ್ಲಾ ರಾಜ್ಯಗಳು ಈ ಪ್ರಕರಣದಲ್ಲಿ ಪಕ್ಷಕಾರರಾಗಿವೆ ಎಂದು ಸಹಾಯಕ ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ನ್ಯಾಯಮೂರ್ತಿಗಳ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಹೈಕೋರ್ಟ್ ಯಾವುದೇ ಆದೇಶ ಮಾಡಲಿಲ್ಲ.
“ಧನ್‌ಬಾದ್‌ನ ನ್ಯಾಯಾಧೀಶರು ಶಂಕಾಸ್ಪದವಾದ ರೀತಿಯಲ್ಲಿ ಸಾವನ್ನಪ್ಪಿದ್ದು, ಧನ್‌ಬಾದ್ ನ್ಯಾಯಾಧೀಶರು ಮತ್ತು ನ್ಯಾಯಿಕ ಅಧಿಕಾರಿಗಳ ಮನೋಸ್ಥೈರ್ಯ ಹೆಚ್ಚಿಸುವ ದೃಷ್ಟಿಯಿಂದ ಜಾರ್ಖಂಡ್ ರಾಜ್ಯದ ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ಆದೇಶ ಮಾಡಲಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.