Chief Justice of India DY Chandrachud 
ಸುದ್ದಿಗಳು

ಅಭಿಪ್ರಾಯವನ್ನೇ ಅಂತಿಮ ತೀರ್ಪೆಂದು ಅರ್ಥೈಸುವ ಸಾಧ್ಯತೆ: ವಿಚಾರಣೆ ವೇಳೆ ನ್ಯಾಯಾಧೀಶರು ಜಾಗರೂಕರಾಗಿರಲು ಸಿಜೆಐ ಸಲಹೆ

ಈಚೆಗೆ ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯ ಕಾನೂನು ವೃತ್ತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ʼನ್ಯಾಯಾಂಗದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವʼ ಎಂಬ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

Bar & Bench

ಸಾಮಾಜಿಕ ಮಾಧ್ಯಮಗಳು ಒಡ್ಡುವ ಸವಾಲುಗಳನ್ನು ಎದುರಿಸಲು ನ್ಯಾಯಾಧೀಶರು ತಮ್ಮನ್ನು ತಾವು ತರಬೇತಿಗೊಳಿಸಿಕೊಂಡಿರಬೇಕಿದ್ದು ನ್ಯಾಯಾಲಯದ ಕಲಾಪ ನೇರ ಪ್ರಸಾರ ಆಗುವಾಗ ಅಥವಾ ನೇರವಾಗಿ ವರದಿಯಾಗುವಾಗ ತಾವು ನೀಡುವ ಹೇಳಿಕೆಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದರು.

ಈಚೆಗೆ ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯ ಕಾನೂನು ವೃತ್ತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ʼನ್ಯಾಯಾಂಗದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವʼ ಎಂಬ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

ಹಾಗೆ ಮಾಡದೆ ಹೋದರೆ ನ್ಯಾಯಾಧೀಶರನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ ಎಂದು ಅವರು ವಿವರಿಸಿದರು.

ಸಾಮಾಜಿಕ ಜಾಲತಾಣಗಳಿಗೂ ಮೊದಲು ನ್ಯಾಯಾಲಯಗಳಲ್ಲಿ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು. ಆದರೆ ಈಗ ಲಕ್ಷಾಂತರ ಪತ್ರಕರ್ತರು ನ್ಯಾಯಾಲಯದ ವಿಚಾರಣೆಗಳನ್ನು ನೇರ ವರದಿ ಮಾಡುತ್ತಿರುತ್ತಾರೆ. ದಿನದ ಕೊನೆಗೆ ವರದಿಯಾಗದೆ ಆ ಕ್ಷಣವೇ ವರದಿಯಾಗುವುದರಿಂದ ನಾವು ಎದುರಿಸಬೇಕಾದುದ್ದನ್ನು ಅದು ಮುಗಿಸಿಬಿಟ್ಟಿರುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮ ನ್ಯಾಯಾಧೀಶರಿಗೆ ಸಮಸ್ಯೆ ಸೃಷ್ಟಿಸುತ್ತದೆ ಎಂಬುದನ್ನು ಒಪ್ಪಿಕೊಂಡ ಅವರು ಈ ವಿಚಾರದಲ್ಲಿ ಆಯ್ಕೆ ಎಂಬುದಿಲ್ಲ ಎಂದರು.

ನ್ಯಾಯಾಧೀಶರು ಮತ್ತು ವಕೀಲರ ನಡುವಿನ ಸಂಭಾಷಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಅಂತಹ ಹೇಳಿಕೆಗಳನ್ನು ನೇರವಾಗಿ ವರದಿ ಮಾಡಲಾಗುತ್ತಿದೆ.  ಎರಡು ವಿಧದ ನ್ಯಾಯಾಧೀಶರಿದ್ದಾರೆ. ಒಬ್ಬರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುವವರು ಮತ್ತೊಬ್ಬರು ವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರು ಎಂದರು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳುತ್ತಿರುವುದೇ ಸಂಭವನೀಯ ತೀರ್ಪಾಗುತ್ತದೆ ಎಂದು ಜನ ಭಾವಿಸಿಬಿಡುತ್ತಾರೆ. ಅದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಏಕೆಂದರೆ ನ್ಯಾಯಾಲಯದಲ್ಲಿ ನಡೆದ ಚರ್ಚೆಯೇ ವಿನಾ ತೀರ್ಪು ಅಥವಾ ದೃಷ್ಟಿಕೋನವಾಗಿರುವುದಿಲ್ಲ ಎಂದು ಹೇಳಿದರು.

ನ್ಯಾಯಾಧೀಶರಿಗೆ ಈ ಸಂಬಂಧ ತರಬೇತಿ ನೀಡುವ ಅಗತ್ಯವಿದ್ದು ಹೊಸ ತಂತ್ರಜ್ಞಾನಗಳು ಅದರಲ್ಲಿಯೂ ಸಾಮಾಜಿಕ ಮಾಧ್ಯಮಗಳು ಒಡ್ಡುವ ಸವಾಲುಗಳ ಬಗ್ಗೆ ಅವರು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ನುಡಿದರು.