Bombay High Court
Bombay High Court 
ಸುದ್ದಿಗಳು

ನ್ಯಾಯಮೂರ್ತಿಗಳು ಚುನಾವಣೆ ಎದುರಿಸಬೇಕಿಲ್ಲ, ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಜನ ಅವರನ್ನು ಅಳೆಯುತ್ತಿದ್ದಾರೆ: ರಿಜಿಜು

Bar & Bench

ನ್ಯಾಯಾಧೀಶರು ಚುನಾವಣೆ ಎದುರಿಸಬೇಕಿಲ್ಲದಿದ್ದರೂ ಅವರನ್ನು ಜನ ಗಮನಿಸುತ್ತಿರುತ್ತಾರೆ, ಅವರ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ಮಾಡುತ್ತಿರುತ್ತಾರೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ.

ದೆಹಲಿ ವಕೀಲರ ಸಂಘ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಒಮ್ಮೆ ನ್ಯಾಯಾಧೀಶರು ನ್ಯಾಯಾಧೀಶರಾದರೆ, ಚುನಾವಣೆ ಎದುರಿಸಬೇಕಾಗಿಲ್ಲ. ಸಾರ್ವಜನಿಕ ಪರಿಶೀಲನೆಗೆ ಒಳಪಡುವುದಿಲ್ಲ. ಅವರನ್ನು ಬದಲಿಸಲು ಸಹ ಸಾಧ್ಯವಿಲ್ಲ. ಆದರೆ ಜನ ನಿಮ್ಮನ್ನು (ನ್ಯಾಯಾಧೀಶರನ್ನು) ಗಮನಿಸುತ್ತಿರುತ್ತಾರೆ. ಜನರು ನಿಮ್ಮ ತೀರ್ಪು, ನಿಮ್ಮ ಕೆಲಸ, ನ್ಯಾಯ ಕುರಿತಾದ ನಿಮ್ಮ ಧೋರಣೆಯನ್ನು ಗಮನಿಸುತ್ತಿರುತ್ತಾರೆ. ಜನ ಅವಲೋಕಿಸುತ್ತಿದ್ದಾರೆ, ಮೌಲ್ಯಮಾಪನ ಮಾಡುತ್ತಿದ್ದಾರೆ ಮತ್ತು ಅಭಿಪ್ರಾಯಗಳನ್ನು ರೂಪಿಸುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.

ರಿಜಿಜು ಭಾಷಣದ ಪ್ರಮುಖಾಂಶಗಳು

  • ರಾಜಕಾರಣಿಗಳು ಸದಾ ಸಾರ್ವಜನಿಕ ವಿಮರ್ಶೆ ಮತ್ತು ಟೀಕೆಗಳನ್ನು ಎದುರಿಸುತ್ತಾರೆ, ಆದರೆ ಈಗ ನ್ಯಾಯಾಧೀಶರು ಕೂಡ ಇದಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಸಮಾಜದಿಂದ ಬಲವಾದ ಪ್ರತಿಕ್ರಿಯೆ ಬರುವಂತಹ ತೀರ್ಪುಗಳನ್ನು ನೀಡುವಾಗ ನ್ಯಾಯಾಧೀಶರು ಈಗ ಜಾಗರೂಕರಾಗಿದ್ದಾರೆ.

  • ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ಮೇಲಿನ ದಾಳಿಗಳನ್ನು ನಿಯಂತ್ರಿಸಲು ಮತ್ತು ಅದಕ್ಕೆ ಸಂಬಂಧಿಸಿದಂತೆ ಕೆಲ ಕಾರ್ಯತಂತ್ರ ರೂಪಿಸಲು ಜೊತೆಗೆ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ನಿಯಂತ್ರಣಕ್ಕೆ ವ್ಯವಸ್ಥೆಯಾಗಬೇಕು. ಇದನ್ನು ನಾವು ಪರಿಗಣಿಸುತ್ತೇವೆ.

  • ನ್ಯಾಯಾಂಗ ನೇಮಕಾತಿಗಳಲ್ಲಿ ಸರ್ಕಾರದ ಅಭಿಪ್ರಾಯ ತಿಳಿಸಲು ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು ಎಂದು ಸಿಜೆಐ ಚಂದ್ರಚೂಡ್ ಅವರನ್ನು ನಾನು ಕೇಳಿದ್ದೇನೆ ಎಂಬುದು ಆಧಾರರಹಿತ. ಜನವರಿ 6ರಂದು ಸಿಜೆಐ ಚಂದ್ರಚೂಡ್ ಅವರಿಗೆ ಬರೆದ ಪತ್ರದಲ್ಲಿ ನಾನು ಹಾಗೆ ಹೇಳಿಲ್ಲ.

  • ಹೇಗೋ ಈ ಪತ್ರ ಬಹಿರಂಗಗೊಂಡು ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರ ತನ್ನ ಪ್ರತಿನಿಧಿಯನ್ನು ಬಯಸುತ್ತಿದೆ ಎಂಬ ಹೆಡ್‌ಲೈನ್‌ಗಳನ್ನು ಮಾಧ್ಯಮಗಳು ಪ್ರಕಟಿಸಿದವು. ಕೊಲಿಜಿಯಂ ಎಂದರೆ ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳಿರುವ ಮಂಡಳಿ. ನಾನು ಅದರಲ್ಲಿ ಮತ್ತೊಬ್ಬರನ್ನು ಹೇಗೆ ಸೇರಿಸಲು ಸಾಧ್ಯ? ಇದರ ಕುರಿತು ಚರ್ಚೆಗಳು ನಡೆದಿವೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರು ಈ ಕುರಿತು ಸಂದರ್ಶನವನ್ನೂ ನೀಡಿದ್ದಾರೆ. ಒಬ್ಬ ದೊಡ್ಡ ವಕೀಲರು ಕೂಡ ಹೇಳಿಕೆ ನೀಡಿದ್ದಾರೆ.  

  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2015ರಲ್ಲಿ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಆಕ್ಷೇಪಿಸಲಾದ ಪತ್ರವಿದೆ. ನಾನು ಆ ಪತ್ರವನ್ನು ಬರೆಯದಿದ್ದರೆ, ಸಚಿವರು ಸುಪ್ರೀಂ ಕೋರ್ಟ್‌ ದೇಶಗಳನ್ನು ಪಾಲಿಸುತ್ತಿಲ್ಲ ಎಂದು ಜನ ಹೇಳುತ್ತಿದ್ದರು.