ಸುದ್ದಿಗಳು

ನ್ಯಾಯಾಧೀಶರು ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ಪ್ರೀತಿಸಬೇಕೇ ವಿನಾ ಹಣವನ್ನಲ್ಲ: ಸಿಜೆಐ ಬಿ.ಆರ್. ಗವಾಯಿ

ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೇಂದ್ರ ಆಡಳಿತ ನ್ಯಾಯಮಂಡಳಿಯ 10ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Bar & Bench

ನ್ಯಾಯಾಧೀಶರು ತಮ್ಮ ಅಧಿಕಾರವನ್ನು ಅತ್ಯಂತ ನಮ್ರತೆ ಮತ್ತು ಜವಾಬ್ದಾರಿಯಿಂದ ಚಲಾಯಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಒತ್ತಾಯಿಸಿದರು.

ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೇಂದ್ರ ಆಡಳಿತ ನ್ಯಾಯಮಂಡಳಿಯ 10ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲ ನ್ಯಾಯಾಧೀಶರ ಕೆಟ್ಟ ನಡೆ ಇಡೀ ನ್ಯಾಯಾಂಗದ ವರ್ಚಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ನ್ಯಾಯಮೂರ್ತಿಗಳ ಅಥವಾ ವಕೀಲರನ್ನು ದುರ್ಬಳಕೆ ಮಾಡಿಕೊಳ್ಳುವುದು ನ್ಯಾಯಾಂಗದ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು ನ್ಯಾಯಾಧೀಶರು ಮತ್ತು ವಕೀಲರು ನ್ಯಾಯವೆಂಬ ಚಿನ್ನದ ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ. ಯಾರೂ ಮೇಲಲ್ಲ ಯಾರೂ ಕೀಳಲ್ಲ, ಇಬ್ಬರೂ ಅತ್ಯಗತ್ಯವಾದವರು. ನ್ಯಾಯಾಧೀಶರು ಮತ್ತು ವಕೀಲರು ಒಟ್ಟಾಗಿ ಕೆಲಸ ಮಾಡದಿದ್ದರೆ ಶತಮಾನಗಳಿಂದ ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ನ್ಯಾಯ ಆಡಳಿತ ಸಂಸ್ಥೆ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗದು ಎಂದರು.

ನ್ಯಾಯಾಂಗದ ನಾಯಕರು ಹಣವನ್ನು ಪ್ರೀತಿಸುತ್ತಿಲ್ಲ, ಬದಲಾಗಿ ನ್ಯಾಯ ಮತ್ತು ಸ್ವಾತಂತ್ರ್ಯದ ಮಹಾನ್‌ ಉದ್ದೇಶವನ್ನು ಪ್ರೀತಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ.
ಸಿಜೆಐ ಬಿ.ಆರ್. ಗವಾಯಿ

ಸಿಜೆಐ ಗವಾಯಿ ಅವರ ಭಾಷಣದ ಪ್ರಮುಖಾಂಶಗಳು

  • ನ್ಯಾಯಾಧೀಶರು ಹಣಕ್ಕೆ ಆದ್ಯತೆ ನೀಡುವ ಬದಲು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುವುದು ಮಹತ್ವದ್ದು.

  • ನ್ಯಾಯಾಲಯಗಳು ಕಕ್ಷಿದಾರರು ಮತ್ತು ವಕೀಲರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು.

  • ಸಾರ್ವಜನಿಕ ನ್ಯಾಯವನ್ನು ಸುಗಮಗೊಳಿಸಲು1985ರ ಆಡಳಿತ ನ್ಯಾಯಮಂಡಳಿ ಕಾಯಿದೆ ಮಹತ್ವದ್ದು.

  • ಕೇಂದ್ರ ಆಡಳಿತಾತ್ಮಕ ನ್ಯಾಯಾಲಯ ಭಾರೀ ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿರುವುದು ಶ್ಲಾಘನೀಯ.

  • ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನ್ಯಾಯಮಂಡಳಿಯ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗುತ್ತಿವೆ.

  • ನ್ಯಾಯಮಂಡಳಿ ಸದಸ್ಯರಿಗೆ ಹೆಚ್ಚಿನ ತರಬೇತಿ ಅಗತ್ಯ.

  • ತೀರ್ಪುಗಳಲ್ಲಿ ನ್ಯಾಯಯುತತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಅರ್ಹತಾ ಮಾನದಂಡಗಳೊಂದಿಗೆ ಏಕರೂಪ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆ ನಡೆಯಬೇಕು.