CBI and Supreme Court
CBI and Supreme Court 
ಸುದ್ದಿಗಳು

ಸಿಬಿಐ ಮತ್ತು ಐಬಿ ನ್ಯಾಯಾಂಗಕ್ಕೆ ಯಾವುದೇ ಸಹಾಯ ನೀಡುತ್ತಿಲ್ಲ: ಸುಪ್ರೀಂ ಕೋರ್ಟ್‌

Bar & Bench

ದೇಶದಲ್ಲಿ ನ್ಯಾಯಾಧೀಶರುಗಳು ತಮಗೆ ಬೆದರಿಕೆ ಇರುವುದಾಗಿ ಹೇಳಿ ದೂರು ದಾಖಲಿಸಿದಾಗಲೂ ಸಹ ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಕೇಂದ್ರ ಗುಪ್ತಚರ ದಳ (ಐಬಿ) ನ್ಯಾಯಾಂಗಕ್ಕೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸಿಬಿಐ ಹಾಗೂ ಐಬಿ ವಿರುದ್ಧ ಕಠಿಣ ಶಬ್ದಗಳಲ್ಲಿ ತನ್ನ ಅಸಮಾಧಾನ ಪ್ರಕಟಿಸಿದೆ.

ಪ್ರಭಾವಿ ವ್ಯಕ್ತಿಗಳು ಅಥವಾ ಪಾತಕಿಗಳ ಪ್ರಕರಣಗಳ ವಿಚಾರಣೆ ಕೈಗೊಳ್ಳುವಾಗ ನ್ಯಾಯಾಧೀಶರಿಗೆ ಬೆದರಿಕೆಯೊಡ್ಡುವುದು, ಮಾನಸಿಕವಾಗಿ ಕಿರುಕುಳ ನೀಡುವುದು ಅನೇಕ ಸಂದರ್ಭಗಳಲ್ಲಿ ನಡೆಯುತ್ತದೆ. ಇಂತಹ ಸನ್ನಿವೇಶಗಳಲ್ಲಿ ಸಿಬಿಐ ಅಥವಾ ಪೊಲೀಸರಿಗೆ ದೂರು ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಿಬಿಐನ ವರ್ತನೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ನ್ಯಾಯಾಂಗಕ್ಕೆ ಯಾವುದೇ ಸಹಾಯ ದೊರೆಯುತ್ತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟ ಶಬ್ದಗಳಲ್ಲಿ ತನ್ನ ಅಸಮಾಧಾನ ಹೊರಹಾಕಿದೆ.

ಇತ್ತೀಚೆಗೆ ಧನ್‌ಬಾದ್‌ ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರು ಬೆಳಗಿನ ವಾಯು ಸಂಚಾರದ ವೇಳೆ ವಾಹನವೊಂದು ಶಂಕಾಸ್ಪದವಾಗಿ ಗುದ್ದಿದ ಪರಿಣಾಮ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು, “ಪಾತಕಿ ವ್ಯಕ್ತಿಗಳನ್ನು ಒಳಗೊಳ್ಳುವಂತಹ ಪ್ರಭಾವಿ ವ್ಯಕ್ತಿಗಳ ವಿರುದ್ಧದ ಪ್ರಕರಣಗಳು ಇಂದು ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ನ್ಯಾಯಾಧೀಶರಿಗೆ ಎಸ್‌ಎಂಎಸ್‌ ಮೂಲಕ ವಾಟ್ಸಪ್‌ ಮೂಲಕ ಮಾನಸಿಕವಾಗಿ ಬೆದರಿಸುವುದು ನಡೆಯುತ್ತಿದೆ. ಈ ಸಂಬಂಧ ದೂರುಗಳನ್ನು ದಾಖಲಿಸಲಾಗಿದೆ. ಆದರೆ ಸಿಬಿಐ ಏನನ್ನೂ ಮಾಡಿಲ್ಲ. ಸಿಬಿಐ ವರ್ತನೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಹೇಳಲು ವಿಷಾದವಾಗುತ್ತಿದೆ,” ಎಂದರು.

ಇದೇ ವೇಳೆ ಮುಖ್ಯ ನ್ಯಾಯಮೂರ್ತಿಗಳು, ದೇಶದಲ್ಲಿ ಹೊಸ ಪ್ರವೃತ್ತಿಯೊಂದು ಆರಂಭವಾಗಿದೆ. ತಮ್ಮ ವಿರುದ್ಧವಾದ ಆದೇಶಗಳನ್ನು ನೀಡಿದಾಗ ನ್ಯಾಯಾಧೀಶರನ್ನು ದೂಷಿಸಲಾಗುತ್ತದೆ ಎಂದು ಸಹ ಹೇಳಿದರು. ಮುಂದುವರೆದು, “ಪೊಲೀಸ್‌ ಅಥವಾ ಸಿಬಿಐಗೆ ನ್ಯಾಯಾಧೀಶರು ದೂರು ನೀಡಿದರೆ ಅವುಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಬಿಐ ಅಥವಾ ಗುಪ್ತಚರ ದಳಗಳು ನ್ಯಾಯಾಲಯಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ,” ಎಂದು ಸಿಜೆಐ ಹೇಳಿದರು.

“ಪೊಲೀಸ್‌ ಅಥವಾ ಸಿಬಿಐಗೆ ನ್ಯಾಯಾಧೀಶರು ದೂರು ನೀಡಿದರೆ ಅವುಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಬಿಐ ಅಥವಾ ಗುಪ್ತಚರ ದಳಗಳು ನ್ಯಾಯಾಲಯಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ."
ಸಿಜೆಐ ಎನ್‌ ವಿ ರಮಣ

ಇದಕ್ಕೆ ದನಿಗೂಡಿಸಿದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಅವರು, ನ್ಯಾಯಾಧೀಶರನ್ನು ಹಲ್ಲೆಗಳಿಂದ ರಕ್ಷಿಸಬೇಕಿದೆ. ಭದ್ರತೆಯನ್ನು ಹೆಚ್ಚಿಸಬೇಕಿದೆ ಎಂದರು. “ನನ್ನ ಬಳಿ ಹಲ್ಲೆಗೊಳಗಾದ ನ್ಯಾಯಾಧೀಶರ ಪಟ್ಟಿ ಇದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ,” ಎಂದು ಎಜಿ ಹೇಳಿದರು.

ಅಂತಿಮವಾಗಿ ನ್ಯಾಯಾಲಯವು ಪ್ರಕರಣದ ಸಂಬಂಧ ಎಲ್ಲ ರಾಜ್ಯಗಳಿಗೆ ನೋಟಿಸ್‌ ಜಾರಿಗೊಳಿಸಿ, ವಸ್ತುಸ್ಥಿತಿ ವರದಿ ಸಲ್ಲಿಸಲು ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ 17ರಂದು ನಡೆಯಲಿದೆ.