Former CJI UU Lalit 
ಸುದ್ದಿಗಳು

ನ್ಯಾಯಪರತೆಗಿಂತಲೂ ಈಗಿನ ನ್ಯಾಯಾಧೀಶರು ಪ್ರತಿಭಾ ಪ್ರದರ್ಶನಕ್ಕೆ ಯತ್ನಿಸುತ್ತಿದ್ದಾರೆ: ನಿವೃತ್ತ ಸಿಜೆಐ ಲಲಿತ್ ಬೇಸರ

ಉಚ್ಚ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡುವ ತೀರ್ಪುಗಳು "ಉದ್ಧರಣ"ಗಳಿಂದ ಕೂಡಿರುವ "ಉದ್ಧರಣೀಯ ನ್ಯಾಯಶಾಸ್ತ್ರ"ಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಕಿವಿ ಹಿಂಡಿದರು.

Bar & Bench

ಇಂದು ನ್ಯಾಯಾಧೀಶರು ನ್ಯಾಯಪರರಾಗಿರುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌  ಹೇಳಿದ್ದಾರೆ.

ನಿನ್ನೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಎಸ್‌ ರವೀಂದ್ರ ಭಟ್‌ ಅವರ ಗೌರವಾರ್ಥ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಹಾಲಿ ಹಾಗೂ ನಿವೃತ್ತ ವಕೀಲ ಗುಮಾಸ್ತರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ನ್ಯಾಯ ಕುರಿತ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಚ್ಚ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡುವ ತೀರ್ಪುಗಳು "ಉದ್ಧರಣ"ಗಳಿಂದ ಕೂಡಿರುವ "ಉದ್ಧರಣೀಯ ನ್ಯಾಯಶಾಸ್ತ್ರ"ಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಕಿವಿ ಹಿಂಡಿದರು.  

“ಬಹುಶಃ ನೀವು ನಿಮ್ಮ ಪ್ರತಿಭೆಯನ್ನು ಹೆಚ್ಚು ಫಲಪ್ರದವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ನನಗನಿಸುತ್ತಿದೆ. ಆದ್ದರಿಂದ ನ್ಯಾಯಪರರಾಗಿರುವುದಕ್ಕಿಗಲೂ ಹೆಚ್ಚಾಗಿ ನೀವು ಪ್ರತಿಭಾ ಪ್ರದರ್ಶನಕ್ಕೆ ಯತ್ನಿಸುತ್ತಿದ್ದೀರಿ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯ ಪಡೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ” ಎಂದು ಅವರು ವ್ಯಂಗವಾಡಿದರು.  

ನ್ಯಾಯಾಂಗದ ಮೇಲೆ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು “ಇದು ಈಗ ಹೆಚ್ಚುತ್ತಿರುವ ಪ್ರವೃತ್ತಿಯಾಗಿದೆ. ಉದ್ಧರಣಗಳ ಸರಪಳಿಯೇ ಇರುತ್ತದೆ. ಇದು ಹೊಸ ಬಗೆಯ ನ್ಯಾಯಶಾಸ್ತ್ರವಾಗಿದೆ. ನಾನಿದನ್ನು ಉದ್ದರಣ ನ್ಯಾಯಶಾಸ್ತ್ರ ಎಂದು ಕರೆಯುತ್ತೇನೆ" ಎಂದರು.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ, ಎಸ್ ಮುರಳೀಧರ್, ಬದರ್ ಅಹ್ಮದ್, ಆರ್ ಬಸಂತ್, ಹಿರಿಯ ವಕೀಲ ರಾಜು ರಾಮಚಂದ್ರನ್ ಹಾಗೂ ವಕೀಲೆ ಮಾಳವಿಕಾ ಪ್ರಸಾದ್ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ನ್ಯಾ. ಲಲಿತ್‌ ಮಾತನಾಡಿದರು.