Mahua Moitra Twitter
ಸುದ್ದಿಗಳು

ಸರ್ಕಾರಕ್ಕೆ ಸಿಟ್ಟುತರಿಸಬಹುದೆಂದು ವಿಪಕ್ಷ ನಾಯಕರಿಗೆ ಪರಿಹಾರ ನೀಡಲು ಭಯಪಡುವ ನ್ಯಾಯಮೂರ್ತಿಗಳು: ಮೊಹುವಾ

ನ್ಯಾಯಮೂರ್ತಿಗಳು ತಮ್ಮ ಅಂತರಂಗಕ್ಕೆ ಧ್ವನಿಯಾಗಿ, ಸಂದರ್ಭಕ್ಕೆ ಅನುಗುಣವಾಗಿ ಗಟ್ಟಿಯಾಗಿ ಸೆಟೆದು ನಿಲ್ಲಬೇಕು ಎಂದು ತೃಣಮೂಲ ಕಾಂಗ್ರೆಸ್‌ ಸಂಸದೆ ಮೊಹುವಾ ಮೊಯಿತ್ರಾ ಸಂಸತ್‌ನಲ್ಲಿ ಹೇಳಿದ್ದಾರೆ.

Bar & Bench

ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವು ಪ್ರಮುಖ ಆಧಾರಸ್ತಂಭವಾಗಿರುವುದರಿಂದ ನ್ಯಾಯಮೂರ್ತಿಗಳು ನ್ಯಾಯಾಂಗದ ಸಮಗ್ರತೆಯನ್ನು ಎತ್ತಿಹಿಡಿಯುವ ಅಗತ್ಯದ ಬಗ್ಗೆ ತೃಣಮೂಲ ಕಾಂಗ್ರೆಸ್‌ ಸಂಸದೆ ಮೊಹುವಾ ಮೊಯಿತ್ರಾ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೊಹುವಾ ಅವರು ದೇಶದ ಜನರ ಧೈರ್ಯ ಮತ್ತು ಪುಟಿದು ನಿಲ್ಲುವ ಗುಣದ ಬಗ್ಗೆ ಒತ್ತಿ ಹೇಳಿದರು.

“ಅಧಿಕಾರಿದಲ್ಲಿರುವ ಪಕ್ಷದ ವಿರುದ್ಧ ನಿಲ್ಲುವ ಮೂಲಕ ದೇಶದ ಬಡ ಜನರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನ್ಯಾಯಮೂರ್ತಿಗಳು ಅಂತರಂಗಕ್ಕೆ ಧ್ವನಿಯಾಗುವ ಮೂಲಕ ಸಂದರ್ಭಕ್ಕೆ ಅನುಗುಣವಾಗಿ ಗಟ್ಟಿಯಾಗಿ ಸೆಟೆದು ನಿಲ್ಲಬೇಕು” ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕರಿಗೆ ಜಾಮೀನು ಮತ್ತು ನ್ಯಾಯ ನಿರಾಕರಿಸುತ್ತಿರುವುದಕ್ಕೆ ನ್ಯಾಯಾಂಗವನ್ನು ಟೀಕಿಸಿರುವ ಮೊಹುವಾ ಅವರು ನ್ಯಾಯಮೂರ್ತಿಗಳು ಸರ್ಕಾರದ ವಿರುದ್ಧ ದನಿ ಎತ್ತಲು ಹೆದರುತ್ತಿದ್ದಾರೆ ಎಂದು ಆರೋಪಿಸಿದರು. "ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಸಿಲುಕಿರುವ ವಿರೋಧ ಪಕ್ಷದ ನಾಯಕರಿಗೆ ಜಾಮೀನು ನಿರಾಕರಿಸಲಾಗುತ್ತಿದೆ. ಆ ಮೂಲಕ ನ್ಯಾಯದ ನಿರಾಕರಣೆ ಮಾಡಲಾಗುತ್ತಿದೆ. ಸರ್ಕಾರಕ್ಕೆ ಸಿಟ್ಟು ತರಿಸಬಹುದು ಎನ್ನುವ ಕಾರಣಕ್ಕೆ ವಿಪಕ್ಷ ನಾಯಕರ ಪ್ರಕರಣಗಳನ್ನು ಮುಟ್ಟಲು ನ್ಯಾಯಮೂರ್ತಿಗಳು ಹೆದರುತ್ತಿದ್ದಾರೆ," ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಭಾರತದ ಬಡ ಜನತೆ ತೋರಿರುವ ಹಾದಿಯನ್ನು ಅನುಸರಿಸುವ ಮೂಲಕ ಸಂದರ್ಭಕ್ಕೆ ಅನುಗುಣವಾಗಿ ಧೈರ್ಯವಾಗಿ ಸೆಟೆದು ನಿಲ್ಲುವಂತೆ ನ್ಯಾಯಾಂಗಕ್ಕೆ ಮೊಹುವಾ ಮನವಿ ಮಾಡಿದರು.

ಕೋಲ್ಕತ್ತಾದಲ್ಲಿನ ಭಾಷಣದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ನ್ಯಾಯಮೂರ್ತಿಗಳು ದೇವರಲ್ಲ. ಸಹಾನುಭೂತಿಯಿಂದ ಜನರಿಗೆ ಸಲ್ಲಿಸಲು ಅವರನ್ನು ನೇಮಿಸಲಾಗಿದೆ ಎಂಬ ಅಂಶವನ್ನು ಮೊಹುವಾ ಉಲ್ಲೇಖಿಸಿದರು. “ಯಾರೂ ಭಾಗಶಃ ಗರ್ಭಿಣಿಯಾಗಲು ಹೇಗೆ ಸಾಧ್ಯವಿಲ್ಲವೋ, ಒಂದು ನೀವು ಗರ್ಭಿಣಿಯಾಗಬೇಕು ಅಥವಾ ಇಲ್ಲ. ಪ್ರಜಾಪ್ರಭುತ್ವದಲ್ಲಿ ನ್ಯಾಯದಾನವು ನಿರ್ಬಂಧರಹಿತವಾಗಿರಬೇಕು. ಇದು ಭಾಗಶಃ ಜಾರಿಯಾಗಲಾಗದು” ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62ಕ್ಕೆ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಮೊಹುವಾ ಅವರು ಇದು ಕೊನೆಯ ಕ್ಷಣದಲ್ಲಿ ಪದೋನ್ನತಿ ಪಡೆಯುವ ಮೂಲಕ ಸೇವಾವಧಿ ವಿಸ್ತರಣೆ ಸಿಗುವ ಅವಕಾಶ ಹಿನ್ನೆಲೆಯಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ ಕೊಲಿಜಿಯಂ ತಾಳಕ್ಕೆ ಹೆಜ್ಜೆ ಹಾಕುವ ಸಾಧ್ಯತೆ ಇರುತ್ತದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತರಾದ ಬಳಿಕ ಲೋಕಪಾಲ ಮುಖ್ಯಸ್ಥರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ವಿವಿಧ ನ್ಯಾಯಾಧಿಕರಣಗಳ ಮುಖ್ಯಸ್ಥರಾಗುವ ಅವಕಾಶ ಇರುತ್ತದೆ ಎಂದರು.