Former CJI Ranjan Gogoi 
ಸುದ್ದಿಗಳು

ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದುಕೊಂಡವರು ಈಗ 'ಆಕ್ಟಿವಿಸ್ಟ್ ಜಡ್ಜ್‌ಗಳು' ಎಂದು ಕುಟುಕಿದ ನಿವೃತ್ತ ಸಿಜೆಐ ಗೊಗೊಯ್

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಮ್ಮೆಯೂ ಭೇಟಿ ಮಾಡಿಲ್ಲ ಎಂದು ಹೇಳಿದ ಗೊಗೊಯ್.

Bar & Bench

ತಾನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ನ್ಯಾ. ರಂಜನ್‌ ಗೊಗೊಯ್‌ ಬುಧವಾರ ತಿಳಿಸಿದರು.

ತಮ್ಮ ಆತ್ಮಚರಿತ್ರೆ 'ಜಸ್ಟೀಸ್ ಫಾರ್ ದಿ ಜಡ್ಜ್' ಬಿಡುಗಡೆ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು. ಪ್ರಕರಣಗಳ ಅನುಚಿತ ಪಟ್ಟಿ ಮತ್ತು ನ್ಯಾಯಾಂಗದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅವರು ವಿವಾದಗಳನ್ನು ಎದುರಿಸಿದ್ದರು. ನ್ಯಾ. ಗೊಗೊಯ್‌ ಅವರು ಸಂವಾದದ ವೇಳೆ ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ:

ಪ್ರಧಾನಿ ಜೊತೆಗಿನ ಸಂಪರ್ಕ ಹಾಗೂ ಕಾರ್ಯಂಗದ ಹಸ್ತಕ್ಷೇಪದ ಕುರಿತು:

ಪ್ರಧಾನಿ, ಕಾನೂನು ಸಚಿವರು ಹಾಗೂ ನನಗೆ ʼಹಾಟ್‌ ಲೈನ್‌ʼ (ನೇರ ಫೋನ್‌ ಸಂಪರ್ಕ ವ್ಯವಸ್ಥೆ) ಕಲ್ಪಿಸಲಾಗಿತ್ತು. ಆದರೆ ಅದನ್ನು ನಾನು ಬಳಸಲಿಲ್ಲ. ನೂರಾರು ವಿಭಿನ್ನ ರೀತಿಯಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಹುದಾಗಿದ್ದು ಅದು ಅಧಿಕಾರದಲ್ಲಿರುವವರನ್ನು ಅವಲಂಬಿಸಿರುತ್ತದೆ. ನಾನು ಒಮ್ಮೆಯೂ ಪ್ರಧಾನಿ ಅವರನ್ನು ಭೇಟಿ ಮಾಡಿಲ್ಲ.

ನ್ಯಾಯಾಂಗದ ಕಾರ್ಯ ನಿರ್ವಹಣೆಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಶೂನ್ಯವಾಗಿದ್ದು ಇದು ಎಲ್ಲರಿಗೂ ತಿಳಿದಿರುವ ವಿಚಾರ.

ರಾಜ್ಯಸಭಾ ಸ್ಥಾನದ ಬಗ್ಗೆ:

ಅಯೋಧ್ಯಾ ತೀರ್ಪಿಗೆ ಬದಲಾಗಿ ನನಗೆ ರಾಜ್ಯಸಭಾ ಸ್ಥಾನವನ್ನು ನೀಡಲಾಯಿತು ಎನ್ನುವ ಆರೋಪವನ್ನುಕೇಳಿದ್ದೇನೆ. ಇದು ಒಪ್ಪುವಂತಹದ್ದಲ್ಲ. ಇದೆಲ್ಲವೂ ಮಾಧ್ಯಮಗಳು ಹಾಗೂ ಪತ್ರಿಕೆಗಳಿಂದ ಸೃಷ್ಟಿಯಾದದ್ದು ಎಂದು ಗೊಗೊಯ್‌ ರಾಜ್ಯಸಭೆಗೆ ತಾವು ನಾಮ ನಿರ್ದೇಶಿತರಾದ ಬಗ್ಗೆ ಮೂಡಿದ್ದ ಶಂಕೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ರಫೇಲ್‌ ತೀರ್ಪಿಗೂ ಮುನ್ನ ಮೋದಿ ನೀಡಿದ ಔತಣಕೂಟದ ಕುರಿತು:

ಸಂವಿಧಾನ ದಿನವಾದ ನವೆಂಬರ್ 26 ರಂದು ಪ್ರಧಾನಿಯವರು ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡಿದ್ದರಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ. ಅವರೊಂದಿಗೆ ಸೆಲ್ಫಿ ತೆಗೆದುಕೊಂಡ ನ್ಯಾಯಮೂರ್ತಿಗಳು ಈಗ ಆಕ್ಟಿವಿಸ್ಟ್‌ ಜಡ್ಜ್‌ಗಳಾಗಿದ್ದಾರೆ ಎಂದು ಗೊಗೊಯ್‌ ಕುಟುಕಿದರು.

ವಿವಾದಾತ್ಮಕ ರೇಫಲ್‌ ವಿಮಾನ ಖರೀದಿ ಒಪ್ಪಂದದ ಕುರಿತಾದ ಪ್ರಕರಣದ ತೀರ್ಪಿಗೂ ಮುನ್ನ ಪ್ರಧಾನಿಯವರು ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಔತಣ ನೀಡಿದ್ದರ ಕುರಿತು "ದಾಲ್‌ ಮೇ ಕುಚ್‌ ಕಾಲಾ ಹೈ" (ಬೇಳೆಯಲ್ಲಿ ಏನೋ ಕಪ್ಪಗಿನ ಹುಳುಕಿದೆ) ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಯಿತಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೊಗೊಯ್‌ ಅವರು, "ದಾಲ್‌ ತೋ ಕಾಲಾ ಹೀ ಹೋತಾ ಹೈ, ನಹೀಂ ತೋ ಕ್ಯಾ ದಾಲ್‌ ಹೈ" (ಬೇಳೆ ಕಪ್ಪಗೇ ಇರುತ್ತದೆ, ಇಲ್ಲವಾದರೆ ಅದು ಬೇಳೆ ಹೇಗಾಗುತ್ತದೆ) ಎನ್ನುವ ಮೂಲಕ ತಳ್ಳಿ ಹಾಕಿದರು.

ಸ್ನೇಹಿತನನ್ನು ಭೇಟಿಯಾಗಿದ್ದೆ ಸಚಿವರನ್ನಲ್ಲ:

ಕಾನೂನು ಸಚಿವರನ್ನು ಭೇಟಿ ಮಾಡುವುದು ಪಾಪವೇ? ನ್ಯಾಯಾಧೀಶರು ನ್ಯಾಯಾಧೀಶರನ್ನು ಮಾತ್ರ ಭೇಟಿ ಮಾಡಬೇಕು ಎಂಬುದನ್ನು ನಾನು ನಂಬುವುದಿಲ್ಲ. ಸ್ನೇಹಿತ ರವಿಶಂಕರ್ ಪ್ರಸಾದ್ (ಮಾಜಿ ಕಾನೂನು ಸಚಿವ) ಅವರನ್ನು ಭೇಟಿ ಮಾಡಿದ್ದೇನೆ. ಕಾನೂನು ಸಚಿವರನ್ನಲ್ಲ.

ಲೈಂಗಿಕ ಕಿರುಕುಳ ಆರೋಪದ ಕುರಿತು:

“ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಪೀಠದ ಭಾಗವಾಗದೇ ಇದ್ದಿದ್ದರೆ ಅದು ಸೂಕ್ತವಾಗಿರುತ್ತಿತ್ತು “ ಎಂದು ಗೊಗೊಯ್ ಅಭಿಪ್ರಾಯ ವ್ಯಕ್ತಪಡಿಸಿದರು.

“ನೀವು ಚೀರುವ ಮೂಲಕ ನನ್ನನ್ನು ಕೆಣಕಲಾಗದು. ಇದು ರಂಜನ್‌ ಗೊಗೊಯ್‌ನನ್ನು ಭೀತಿಗೊಳಿಸುವುದಿಲ್ಲ. ಸಂವಿಧಾನ ಬಾಹಿರವಾದ ಗದ್ದಲಗಳಿಗೆ ನಾನು ತಲೆಬಾಗುವುದಿಲ್ಲ,“ ಎಂದು ಅವರು ತಮ್ಮ ಮೇಲೆ ಬಂದ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

"ಹೆಚ್ಚುವರಿ ರಿಜಿಸ್ಟ್ರಾರ್ ಆಂತರಿಕ ದೂರುಗಳ ಸಮಿತಿಯ ಭಾಗವಾಗಿದ್ದಾರೆ. ಹೆಚ್ಚುವರಿ ರಿಜಿಸ್ಟ್ರಾರ್‌ ಅವರು ನನ್ನ ಪರವಾಗಿ 24 ಗಂಟೆಗಳ ಒಳಗೆಲ್ಲಾ ಪ್ರಕರಣ ನಿರ್ಧರಿಸಬಹುದಿತ್ತು. ಆದರೆ, ನಾನು ನನ್ನ ಕುತ್ತಿಗೆ ಚಾಚಿ ಮಾಜಿ ಸಿಜೆಐ ಬೋಬ್ಡೆ ಅವರಿಗೆ ಕುಣಿಕೆ ನೀಡಿದ್ದೆ. ಅವರು ನನ್ನನ್ನು ಗಲ್ಲಿಗೇರಿಸಿ ಖುಷಿಯಿಂದ7 ತಿಂಗಳ ಹೆಚ್ಚುವರಿ ಅಧಿಕಾರ ಅನುಭವಿಸಬಹುದಿತ್ತು. ನೀವು ಏನು ಮಾತನಾಡುತ್ತಿದ್ದೀರಿ?" ಎಂದು ಲೈಂಗಿಕ ಕಿರುಕುಳ ಆರೋಪದ ಆಂತರಿಕ ತನಿಖಾ ಸಮಿತಿಯು ಪಾರದರ್ಶಕತೆಯಿಂದ ಕೂಡಿತ್ತು ಎಂದು ಸಮರ್ಥಿಸಿಕೊಂಡರು. ಆಂತರಿಕ ಸಮಿತಿಯು ಹಲ್ಲಿಲ್ಲದೆ ಇರುವಂತಹದ್ದಲ್ಲ ಎನ್ನುವ ಮೂಲಕ ನಾಮ್‌ಕೇವಾಸ್ತೆ ಸಮಿತಿಯಾಗಿರಲಿಲ್ಲ ಎನ್ನುವ ಇಂಗಿತ ವ್ಯಕ್ತಪಡಿಸಿದರು.

ಅಯೋಧ್ಯೆ ತೀರ್ಪು:
"ನಾನು ಅಯೋಧ್ಯೆಯನ್ನು ಪುನರುತ್ಥಾನಗೊಳಿಸಿಲ್ಲ. ಇದು ನನ್ನ ಹಿಂದಿನವರು ನನಗೆ ನೀಡಿದ ಜವಾಬ್ದಾರಿಯಾಗಿದ್ದು ಗಡುವು ನಿಗದಿಪಡಿಸಿದ್ದರು. ನನಗೆ ಪಲಾಯನ ಮಾಡುವ ಅಥವಾ ಹೋರಾಡುವ ಎರಡು ಆಯ್ಕೆಗಳಿದ್ದವು. ಸಿಜೆಐ ಬೊಬ್ಡೆ ಹೇಳುವಂತೆ ಯೋಧರ ಕುಟುಂಬದಿಂದ ಬಂದಿದ್ದ ನಾನು ಹೋರಾಡಿದೆ ಎಂದರು."

ಮುಖ್ಯ ಪ್ರಕರಣಗಳ ತ್ವರಿತ ಆಲಿಸದಿರುವಿಕೆ ಬಗ್ಗೆ:

"ನ್ಯಾಯಮೂರ್ತಿಗಳ ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ನಾನು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದು ಗೌರವ ನೀಡಬೇಕಾಗುತ್ತದೆ. ಇನ್ನು ತ್ವರಿತಗತಿಯಲ್ಲಿ ಪ್ರಕರಣಗಳನ್ನು ಆಲಿಸಿಲ್ಲ ಎನ್ನುವ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಏಕೆಂದರೆ ಅದು ಊಹಾತ್ಮಕ ಪ್ರಶ್ನೆ. “

ಮುಖ್ಯಮಂತ್ರಿ ನೆರವು ಯಾಚಿಸಿದ್ದ ಪ್ರಸಂಗ:

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯ್‌ ತನ್ನ ಪರವಾಗಿ ತೀರ್ಪು ಕೋರಿದರು. ಅವರು ಈಗ ಇಲ್ಲ. ಅವರ ಬಗ್ಗೆ ಏಕೆ ಮಾತನಾಡಲಿ? ತನ್ನ ಪಿಂಚಣಿ ಹಣದಲ್ಲಿ ವಿಮಾನದಲ್ಲಿ ಬಂದು ನನ್ನ ತಾಯಿ ನನ್ನನ್ನು ಭೇಟಿಯಾಗಬೇಕಿತ್ತು. ನಾನು ಪ್ರಕರಣದಲ್ಲಿ ತೀರ್ಪು ನೀಡಿದ ನಂತರ ನನ್ನ ತಾಯಿ ಈ ಬಗ್ಗೆ ನನಗೆ ಹೇಳಿದರು.