Karnataka High Court 
ಸುದ್ದಿಗಳು

ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯ ನ್ಯಾ. ಹುನಗುಂದ ನೇಮಕ ಹಿಂಪಡೆದ ರಾಜ್ಯ ಸರ್ಕಾರ

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನ್ಯಾ. ಸಿ ಜಿ ಹುನಗುಂದ ಅವರನ್ನು ನೇಮಿಸಿ 2022ರ ಅಕ್ಟೋಬರ್‌ 21ರಂದು ಸರ್ಕಾರ ಆದೇಶಿಸಿತ್ತು.

Bar & Bench

ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ ಜಿ ಹುನಗುಂದ ಅವರನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಿಲೇವಾರಿ ಮಾಡಿದೆ.

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನ್ಯಾಯಮೂರ್ತಿ ಸಿ ಜಿ ಹುನಗುಂದ ಅವರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ವಕೀಲ ಎಸ್‌. ಉಮಾಪತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಉಮಾಪತಿ ಅವರು, ಈ ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿಯೇ ನ್ಯಾಯಮೂರ್ತಿ ಹುನಗುಂದ ಅವರನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದ ಆದೇಶವನ್ನು ಹಿಂಪಡೆದು ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್‌ 21ರಂದು ಆದೇಶಿಸಿದೆ. ಆ ಆದೇಶವನ್ನು ತಮಗೆ ರವಾನಿಸಿದೆ. ಹಾಗಾಗಿ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಇಲ್ಲವಾಗಿದ್ದು, ಅರ್ಜಿ ಹಿಂಪಡೆಯಲಾಗುವುದು ಎಂದು ತಿಳಿಸಿ ಮೆಮೊ ಸಲ್ಲಿಸಿದರು. ಆ ಮೆಮೊವನ್ನು ದಾಖಲಿಸಿಕೊಂಡ ಪೀಠ ಅರ್ಜಿ ಇರ್ತ್ಯಪಡಿಸಿತು.

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಂಗ ಸದಸ್ಯರನ್ನಾಗಿ ನ್ಯಾ. ಸಿ ಜಿ ಹುನಗುಂದ ಅವರನ್ನು ನೇಮಿಸಿ 2022ರ ಅಕ್ಟೋಬರ್‌ 21ರಂದು ಸರ್ಕಾರ ಆದೇಶಿಸಿತ್ತು. ಅದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದ ಅರ್ಜಿದಾರರು, ನ್ಯಾ.ಹುನಗುಂದ ಅವರು 2012ರಿಂದ 2017ರವರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಿಯಮಗಳ ಪ್ರಕಾರ ಅವರನ್ನು ಪುನಾ ಅರೆ-ನ್ಯಾಯಿಕ ಪ್ರಾಧಿಕಾರ ಸದಸ್ಯರಾಗಿ ನೇಮಿಸಲು ಅವಕಾಶವಿಲ್ಲ. ಆದ್ದರಿಂದ ಅವರ ನೇಮಕಾತಿ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಆ ಅರ್ಜಿಯನ್ನು 2023ರ ಆಗಸ್ಟ್‌ನಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತ್ತು. ಈ ನಡುವೆ ನ್ಯಾ. ಹುನಗುಂದ ನೇಮಕಾತಿ ಹಿಂಪಡೆದು 2023ರ ಸೆಪ್ಟೆಂಬರ್‌ 21ರಂದು ಸರ್ಕಾರ ಆದೇಶಿಸಿತ್ತು.