Justice P Krishna Bhat 
ಸುದ್ದಿಗಳು

ದುರುದ್ದೇಶಿತ ದೂರುಗಳು ಬಂದಾಗ ನ್ಯಾಯಾಂಗದ ಅಧಿಕಾರಿಗಳು ಮಂಪರು ಪರೀಕ್ಷೆಗೆ ಮುಂದಾಗಬೇಕು: ನ್ಯಾ. ಕೃಷ್ಣ ಭಟ್‌

ಕರ್ನಾಟಕ ರಾಜ್ಯ ವಕೀಲ ಪರಿಷತ್‌ ಗುರುವಾರ ಹೈಕೋರ್ಟ್‌ ಪ್ರಧಾನ ಪೀಠದ ಕೋರ್ಟ್‌ ಹಾಲ್‌ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ. ಭಟ್‌ ಮಾತನಾಡಿದರು. ಆಗಸ್ಟ್‌ 7ರಂದು ನ್ಯಾ. ಭಟ್‌ ನಿವೃತ್ತಿ ಹೊಂದಲಿದ್ದಾರೆ.

Bar & Bench

ನ್ಯಾಯಾಂಗದ ಸಮಗ್ರತೆಯನ್ನು ಎತ್ತಿಹಿಡಿಯಲು, ನ್ಯಾಯಾಧೀಶರನ್ನು ದುರುದ್ದೇಶಪೂರಿತ ಮತ್ತು ಸುಳ್ಳು ಆರೋಪಗಳಿಂದ ರಕ್ಷಿಸಲು ಕಠಿಣ ಮತ್ತು ನವೀನ ಕ್ರಮಗಳ ಅಗತ್ಯವಿದ್ದು, ನ್ಯಾಯಮೂರ್ತಿಗಳು ಮತ್ತು ದೂರುದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ನಿರ್ಗಮಿತ ನ್ಯಾಯಮೂರ್ತಿ ಪಿ ಕೃಷ್ಣ ಭಟ್‌ ಹೇಳಿದರು.

ಕರ್ನಾಟಕ ರಾಜ್ಯ ವಕೀಲ ಪರಿಷತ್‌ ಗುರುವಾರ ಹೈಕೋರ್ಟ್‌ ಪ್ರಧಾನ ಪೀಠದ ಕೋರ್ಟ್‌ ಹಾಲ್‌ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ. ಭಟ್‌ ಮಾತನಾಡಿದರು.

ನ್ಯಾಯಾಂಗದ ಅಧಿಕಾರಿಗಳು ತಮ್ಮ ಸ್ವಾತಂತ್ರ್ಯ ಮತ್ತು ಪ್ರಾಮಾಣಿಕತೆಯನ್ನು ರಕ್ಷಿಸಲು ಎಷ್ಟೇ ಪ್ರಯತ್ನಪಟ್ಟರೂ ನ್ಯಾಯಮೂರ್ತಿಗಳ ವೃತ್ತಿ ಬದುಕಿನ ಅತ್ಯಂತ ಮಹತ್ವದ ಘಟ್ಟಗಳಲ್ಲಿ ದುರ್ನಡತೆ ದೂರುಗಳು ಕೇಳಿಬರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. “ಆರೋಪ ಸಾಬೀತಾದರೆ ಅಥವಾ ಅಂತಹ ಭಾವನೆ ಉಳಿದರೆ ನ್ಯಾಯಾಧೀಶರು ಸ್ವತಂತ್ರವಾಗಿ ಇರುವುದಿಲ್ಲ ಮತ್ತು ಅವರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಇದಕ್ಕೆ ಪರಿಹಾರವೇನು?" ಎಂದು ಪ್ರಶ್ನೆ ಎತ್ತಿದರು.

ಮುಂದುವರೆದು, ಪರಿಹಾರವನ್ನು ಸೂಚಿಸಿದ ನ್ಯಾ. ಭಟ್‌ ಅವರು ಅಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ಅಧಿಕಾರಿಗಳು, ದೂರುದಾರರನ್ನು ಒಳಗೊಂಡಂತೆ ಮಂಪರು ಪರೀಕ್ಷೆಗೆ ಒಳಗಾಗಲು ಇಚ್ಛಿಸಬೇಕು. ಇದು ಮೊದಲಿಗೆ ಅಸಂಬಂದ್ಧ ಮತ್ತು ವಿಪರೀತ ಎನಿಸಬಹುದು ಎಂದರು.

“ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು ಮತ್ತು ಲೋಕಾಯುಕ್ತ, ಉಪಲೋಕಾಯುಕ್ತದಂಥ ಮಹತ್ವದ ಸ್ಥಾನದಲ್ಲಿರುವವರು ಮಂಪರು ಪರೀಕ್ಷೆಗೆ (ನಾರ್ಕೊ ಅನಾಲಿಸಿಸ್‌ ಟೆಸ್ಟ್‌) ಮುಂದಾಗಬೇಕು. ಅದೇ ರೀತಿ ಈ ಹುದ್ದೆಯಲ್ಲಿರುವವರು ಸೂಚಿಸಿದ ದೂರು ನೀಡಿದ ನಿರ್ದಿಷ್ಟ ವ್ಯಕ್ತಿಗೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು” ಎಂದು ಅಭಿಪ್ರಾಯಪಟ್ಟರು.

ತಾವು ಕರ್ತವ್ಯ ನಿಭಾಯಿಸುತ್ತಿರುವ ಹುದ್ದೆಗೆ ವ್ಯಕ್ತಿಗತವಾಗಿ ಪ್ರತಿಯೊಬ್ಬ ನ್ಯಾಯಮೂರ್ತಿಯು ಪ್ರಾಮಾಣಿಕವಾಗಿ ನಡೆದುಕೊಂಡರೆ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಬಹುದು ಎಂದು ಹೇಳಿದರು. “ನನ್ನ ಪ್ರಕಾರ ನ್ಯಾಯಾಂಗದ ಸ್ವಾಯಂತ್ರ್ಯಕ್ಕೆ ಬೆದರಿಕೆ ಎಂಬುದು ಕಲ್ಪಿತ ಕತೆ. ವ್ಯಕ್ತಿಗತವಾಗಿ ನ್ಯಾಯಮೂರ್ತಿಯು ಸ್ವತಂತ್ರವಾಗಿ ಉಳಿದರೆ ನ್ಯಾಯಾಂಗದ ಸ್ವಾತಂತ್ರ್ಯ ಸಾಧನೆ ಸಾಧ್ಯ. ಇದನ್ನು ಸಾಧಿಸುವುದು ಹೇಗೆ? ನ್ಯಾಯಾಧೀಶರು ತಾತ್ವಿಕ ಗುಣ ಮತ್ತು ಸಚ್ಚಾರಿತ್ರ್ಯವನ್ನು ಅಂತರ್ಗತಗೊಳಿಸಿಕೊಳ್ಳಬೇಕು. ನ್ಯಾಯಾಧೀಶರು ನಿಸ್ಸಂಗಿಯಾದಾಗ (ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್‌ ವೆಂಕಟರಾಮಯ್ಯ ಅವರ ಸಮಯೋಚಿತ ನುಡಿ) ಸ್ವತಂತ್ರ ನ್ಯಾಯಾಂಗ ಸಾಧ್ಯ. ನ್ಯಾಯ ಮಾರ್ಗದಲ್ಲಿ ನಡೆಯುವ ನ್ಯಾಯಾಧೀಶರಿಗೆ ಕಾನೂನಿನಲ್ಲಿ ಹಲವು ರಕ್ಷಣೆಗಳಿವೆ” ಎಂದು ಹೇಳಿದರು.

ನ್ಯಾಯಾಂಗದಲ್ಲಿನ ಶ್ರೇಣೀಕೃತ ವ್ಯವಸ್ಥೆಯು ಕೆಲವು ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಯ ಆತ್ಮ ಗೌರವ ಮತ್ತು ಸ್ವಾತಂತ್ರ್ಯದ ಭಾವನೆಗೆ ಹೇಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದನ್ನೂ ಅವರು ವಿವರಿಸಿದರು. ಅಲ್ಲದೇ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಮಕ್ಕಳು ನ್ಯಾಯಾಂಗದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ವಿಧಾನಕ್ಕೆ ನ್ಯಾ. ಭಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾ. ಭಟ್‌ ಹಿನ್ನೆಲೆ: ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಪಡ್ನೂರು ಗ್ರಾಮದಲ್ಲಿ 1960ರ ಆಗಸ್ಟ್‌ 8ರಂದು ಜನಿಸಿದ ನ್ಯಾ. ಭಟ್‌ ಅವರು ಮಂಗಳೂರಿನ ಸೇಂಟ್‌ ಅಲೋಸಿಯಸ್‌ ಕಾಲೇಜಿನಲ್ಲಿ ಬಿ. ಎಸ್‌ಸಿ ಪದವಿ ಪಡೆದರು. ವಾರಾಣಸಿಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಪಡೆದಿರುವ ಅವರು ಮೊದಲಿಗೆ ಮಂಗಳೂರಿನಲ್ಲಿ ಪ್ರಾಕ್ಟೀಸ್‌ ಆರಂಭಿಸಿದರು. 1989ರ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಆರಂಭಿಸಿದ್ದರು.

1998ರಲ್ಲಿ ನೇರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾ. ಭಟ್‌ ಅವರು ಬೀದರ್‌, ತುಮಕೂರು, ರಾಯಚೂರು, ಬೆಳಗಾವಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದರು. ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

2020ರ ಮೇ 21ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಭಟ್‌ ಅವರು 2021ರ ಸೆಪ್ಟೆಂಬರ್‌ 25ರಂದು ಖಾಯಂಗೊಂಡಿದ್ದರು.

ಎರಡು ದಶಕಗಳ ಕಾಲ ಜಿಲ್ಲಾ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದರೂ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವಾಗ ನ್ಯಾ. ಭಟ್‌ ಅವರು ವಿವಾದದ ಕೇಂದ್ರಬಿಂದುವಾಗಿದ್ದರು. 2016ರಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ನ್ಯಾ. ಭಟ್‌ ಅವರ ಹೆಸರು ಶಿಫಾರಸ್ಸು ಮಾಡಿದ್ದರೂ ಕೆಲವು ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಪ್ರಸ್ತಾವವನ್ನು ಹಿಂದಿರುಗಿಸಿತ್ತು.

ಬೆಳಗಾವಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದಾಗ ಭಟ್‌ ಅವರು ನ್ಯಾಯಾಂಗ ಅಧಿಕಾರಿಯೊಬ್ಬರ ದುರ್ನಡತೆಯ ಬಗ್ಗೆ ತಿಳಿಸಿದ್ದರು. ಮುಂದೆ ನ್ಯಾ. ಭಟ್‌ ಅವರ ಪದೋನ್ನತಿಯ ಸಂದರ್ಭದಲ್ಲಿ ಅದೇ ಮಹಿಳಾ ಅಧಿಕಾರಿಯು ಭಟ್‌ ಅವರ ವಿರುದ್ಧ ದೂರು ನೀಡಿದ್ದರು. ಇದು ನ್ಯಾ. ಭಟ್‌ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೆನ್ನಲಾಯಿತು.

ನ್ಯಾ. ಭಟ್‌ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದ್ದರೂ ಇದನ್ನು ಕೇಂದ್ರ ಸರ್ಕಾರ ಪರಿಗಣಿಸಿರಲಿಲ್ಲ. ಈ ಸಂಬಂಧ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ಪತ್ರ ಬರೆದಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್‌ ಅವರು ನ್ಯಾಯಾಂಗ ಮತ್ತು ಸರ್ಕಾರದ ನಡುವಿನ ಸ್ನೇಹಪರತೆಯ ಕುರಿತು ಎಚ್ಚರಿಕೆ ಗಂಟೆ ಬಾರಿಸಿದ್ದರು.