ಲೋಕಸಭೆಯಿಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಹೂವಾ ಮೊಯಿತ್ರಾ ಅವರ ಉಚ್ಚಾಟನೆ ಪ್ರಶ್ನಿಸಿರುವ ಅರ್ಜಿಯನ್ನು ನ್ಯಾಯಾಲಯಗಳು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಲೋಕಸಭೆ ತಿಳಿಸಿದೆ. ಸಂಸತ್ತಿನ ಆಂತರಿಕ ಕಾರ್ಯ ಮತ್ತು ಅಧಿಕಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡದಂತೆ ಸಂವಿಧಾನದ 122ನೇ ವಿಧಿ ನಿರ್ಬಂಧಿಸಿರುವುದನ್ನು ಅದು ಇದೇ ವೇಳೆ ಪ್ರಸ್ತಾಪಿಸಿದೆ.
ಸಂವಿಧಾನದ ಸಾರ್ವಭೌಮ ಅಂಗವಾಗಿ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಅನುಪಾತದ ಸಿದ್ಧಾಂತದ ಆಧಾರದಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅಂತಹ ಯಾವುದೇ ಪ್ರಕ್ರಿಯೆ ಸಂವಿಧಾನದ ಮೂಲಭೂತ ಲಕ್ಷಣವಾದ ಅಧಿಕಾರ ಪ್ರತ್ಯೇಕತೆಯ ತತ್ವಕ್ಕೆ ವಿರುದ್ಧ ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ.
ಲೋಕಸಭಾ ಸಚಿವಾಲಯ ಅರ್ಜಿಯ ಪ್ರಮುಖಾಂಶಗಳು
ಹಿರಾನಂದಾನಿ ಅವರೊಂದಿಗೆ ಪಾಸ್‌ವರ್ಡ್ ಹಂಚಿಕೊಂಡ ವಿಚಾರ ಭಾರತದ ಭದ್ರತೆ ಮತ್ತು ಸಮಗ್ರತೆಗೆ ನೇರವಾಗಿ ಸಂಬಂಧಿಸಿದ್ದಾಗಿದೆ.
ಸದನವೇ ತನ್ನ ಕಾನೂನುಬದ್ಧತೆಯ ಏಕೈಕ ತೀರ್ಪುಗಾರನಾಗಿದ್ದು ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಸಂಸತ್ತಿನ (ಹಾಗೂ ಅದರ ಅಂಗಗಳ) ಕಾರ್ಯಕಲಾಪಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ.
ಮೂರನೇ ವ್ಯಕ್ತಿಗೆ ಅನಧಿಕೃತವಾಗಿ ಲಾಗಿನ್ ಮತ್ತು ಪಾಸ್‌ವರ್ಡ್ ಮಾಹಿತಿ ನೀಡುವುದಕ್ಕೆ ಲೋಕಸಭೆ ಸಚಿವಾಲಯದ ಅನುಮತಿ ಇಲ್ಲ.
ಸಂಸದರು ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ತನಗೆ ಇದೆ.
ಹಾಗೆ ಮಾಹಿತಿ ಹಂಚಿಕೊಳ್ಳುವುದು ವಿಶ್ವಾಸದ್ರೋಹವಾಗಲಿದ್ದು ಅನೈತಿಕ ನಡವಳಿಕೆ ಎನಿಸಿಕೊಳ್ಳುತ್ತದೆ.
ಮೊಯಿತ್ರಾ ಅವರು 47 ಸಂದರ್ಭಗಳಲ್ಲಿ ಮೂರನೇ ವ್ಯಕ್ತಿಗಳೊಂದಿಗೆ ಲಾಗಿನ್ ಮಾಹಿತಿ ಹಂಚಿಕೊಂಡಿದ್ದಾರೆ.
ತನಗೆ ಟೈಪಿಸುವ ಕೆಲಸದ ಸಹಾಯಕ್ಕಾಗಿ (ಮುದ್ರೀಕರಿಸುವುದಕ್ಕಾಗಿ) ಗೌಪ್ಯ ಮಾಹಿತಿಯನ್ನು ದುಬೈನಲ್ಲಿ ನೆಲೆಸಿರುವವರೊಂದಿಗೆ ಹಂಚಿಕೊಂಡಿದ್ದೇನೆ ಎಂದು ಅವರು ನೈತಿಕ ಸಮಿತಿಯ ಮುಂದೆ ಹೇಳಿಕೊಂಡಿದ್ದು ಇಂತಹ ಸಮರ್ಥನೆ ಅರ್ಥಕ್ಕೆ ನಿಲುಕದ್ದು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಪ್ರಕರಣವನ್ನು ಮೇ 6ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಮೊಯಿತ್ರಾ ಅವರು ಸಂಸತ್ತಿನಲ್ಲಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರು ಸೂಚಿಸಿದಂತೆ ಪ್ರಶ್ನೆ ಕೇಳಿದ್ದು ಅದಕ್ಕಾಗಿ ದುಬಾರಿ ಉಡುಗೊರೆ ಪಡೆದಿದ್ದಾರೆ. ಅಲ್ಲದೇ ತಮ್ಮ ಸಂಸತ್ತಿನ ಖಾತೆ ಲಾಗ್ ಇನ್ ಅಂಶಗಳನ್ನು ಹಂಚಿಕೊಂಡಿದ್ದಾರೆ ಎಂದು ದೆಹದ್ರಾಯ್ ಮತ್ತು ದುಬೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಹುವಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ದುಬೆ ಮತ್ತು ದೆಹ್ರದಾಯ್ ಅವರ ಆರೋಪಗಳ ಆಧಾರದ ಮೇಲೆ, ಲೋಕಸಭಾ ನೈತಿಕ ಸಮಿತಿಯು ಮೊಯಿತ್ರಾ ಅವರನ್ನು ಲೋಕಸಭೆಯಿಂದ ತೆಗೆದುಹಾಕಲು ಸೂಚಿಸಿತ್ತು, ನಂತರ ಅವರನ್ನು ಡಿಸೆಂಬರ್ 8ರಂದು ಸಂಸತ್ತಿನಿಂದ ಉಚ್ಛಾಟಿಸಲಾಗಿತ್ತು. ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮೊಯಿತ್ರಾ ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಮಹುವಾ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಜನವರಿಯಲ್ಲಿ ಲೋಕಸಭೆ ಸೆಕ್ರೇಟರಿಯೇಟ್‌ನ ಪ್ರತಿಕ್ರಿಯೆ ಕೇಳಿತ್ತು. ಆದರೆ ಆಕೆಗೆ ಮಧ್ಯಂತರ ಪರಿಹಾರ ನೀಡಲು ಅದು ಆಗ ಒಪ್ಪಿರಲಿಲ್ಲ.