ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ, ನ್ಯಾಯಮೂರ್ತಿ ಸೌಮೆನ್ ಸೇನ್ 
ಸುದ್ದಿಗಳು

ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಂಘರ್ಷ: ಜಾತಿ ಪ್ರಮಾಣಪತ್ರ ಹಗರಣದ ವಿಚಾರಣೆ ತಾನೇ ನಡೆಸಲು ಸುಪ್ರೀಂ ನಿರ್ಧಾರ

ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸದಿರಲು ಇಂದು ನಿರ್ಧರಿಸಿದ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನಷ್ಟೇ ತನಗೆ ವರ್ಗಾಯಿಸಿಕೊಂಡಿತು.

Bar & Bench

ಪಶ್ಚಿಮ ಬಂಗಾಳದ ಜಾತಿ ಪ್ರಮಾಣಪತ್ರ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನ ಇಬ್ಬರು ಹಾಲಿ ನ್ಯಾಯಮೂರ್ತಿಗಳ ನಡುವೆ ಸಂಘರ್ಷ ತಲೆದೋರಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಹೈಕೋರ್ಟ್‌ನಿಂದ ತನಗೆ ವರ್ಗಾಯಿಸಿಕೊಂಡಿದೆ (ಕಲ್ಕತ್ತಾ ಹೈಕೋರ್ಟ್‌ ಆದೇಶಗಳು ದಿನಾಂಕ 24.01.2024 ಮತ್ತು 25.01.2024 ಮತ್ತು ಪೂರಕ ವಿಷಯಗಳು).

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ,  ಸೂರ್ಯಕಾಂತ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಜಸ್ಟೀಸ್ ವರ್ಸಸ್ ಜಸ್ಟೀಸ್ ಪ್ರಕರಣ

ನ್ಯಾಯಮೂರ್ತಿ ಸೌಮೆನ್ ಸೇನ್ ಅವರ ನೇತೃತ್ವದ ವಿಭಾಗೀಯ ಪೀಠ ಹೊರಡಿಸಿದ್ದ ತಡೆಯಾಜ್ಞೆಯನ್ನು ನಿರ್ಲಕ್ಷಿಸುವಂತೆ ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ವಿಲಕ್ಷಣ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಈ ಹಿಂದೆ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿತ್ತು.

ನ್ಯಾಯಮೂರ್ತಿಗಳಾದ ಗಂಗೋಪಾಧ್ಯಾಯ ಮತ್ತು ಸೇನ್ ನಡುವಿನ ಘರ್ಷಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಸುಪ್ರೀಂ ಕೋರ್ಟ್, ಅಂತಹ ಯಾವುದೇ ಹೇಳಿಕೆ ಹೈಕೋರ್ಟ್ ವಿಚಾರಣೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

'ಏಕಸದಸ್ಯ ಪೀಠ ಅಥವಾ ವಿಭಾಗೀಯ ಪೀಠದ ಮೇಲೆ ದೂಷಣೆ ಹೊರಿಸುವುದು ಸೂಕ್ತವಲ್ಲ. ನಾವು ಏನೇ ಹೇಳಿದರೂ ಅದು ಉಚ್ಚ ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತದೆ. ನಾವು ಇದನ್ನು ಬೇರೆ ರೀತಿಯಲ್ಲಿ ನಿಭಾಯಿಸುತ್ತೇವೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಹೈಕೋರ್ಟ್‌ನಲ್ಲಿ ವಿವಾದದ ಘಟನೆಗಳನ್ನು ಸೃಷ್ಟಿಸಿದ ಪ್ರಕರಣವನ್ನು ಇನ್ನುಮುಂದೆ ತಾನೇ ವಿಚಾರಣೆ ನಡೆಸುವುದಾಗಿ ಅದು ಇದೇ ಸಂದರ್ಭದಲ್ಲಿ ತಿಳಿಸಿದ್ದು ಕೆಲ ಕಾಲದ ಬಳಿಕ ಪ್ರಕರಣವನ್ನು ಪಟ್ಟಿ ಮಾಡುವುದಾಗಿ ತಿಳಿಸಿದೆ.

ಈ ಮಧ್ಯೆ, ವಿವಿಧ ಹಿರಿಯ ವಕೀಲರು ಇಂದು ಸುಪ್ರೀಂ ಕೋರ್ಟ್ ಪೀಠದೆದುರು ಪ್ರಾಸಂಗಿಕವಾಗಿ ಕಳವಳ ವ್ಯಕ್ತಪಡಿಸಿದರು.

"ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಇಂತಹ ವಿಷಯಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದಾರೆ. ಅವರು ಇದೇ ಕೆಲಸ ಮುಂದುವರಿಸುತ್ತಾರೆ" ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೆಲವು ಆಘಾತಕಾರಿ ಸಂಗತಿಗಳಿವೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪರವಾಗಿ ಹಿರಿಯ ವಕೀಲ ಕೆ ಟಿ ಎಸ್ ತುಳಸಿ ವಾದ ಮಂಡಿಸಿದರು.

ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸದಿರಲು ಇಂದು ನಿರ್ಧರಿಸಿದ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನಷ್ಟೇ ತನಗೆ ವರ್ಗಾಯಿಸಿಕೊಂಡಿತು.

"ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣ ಹಂಚಿಕೆ ಮಾಡುತ್ತಿದ್ದಾರೆ. ನಾವು ಅವರ ಅಧಿಕಾರ ಕಸಿದುಕೊಳ್ಳಬಾರದು" ಎಂದು ಸಿಜೆಐ ಹೇಳಿದರು.