ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಮತ್ತು ಕಲ್ಕತ್ತಾ ಹೈಕೋರ್ಟ್ 
ಸುದ್ದಿಗಳು

ವಿವಾದಗಳಿಗೆ ಹೊಸಬರಲ್ಲ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ

ವಿಸ್ತೃತ ಪೀಠದ ಆದೇಶಗಳ ನಿರ್ಲಕ್ಷ್ಯ, ರಾಜಕೀಯ ವಿಷಯಗಳ ಬಗ್ಗೆ ಸುದ್ದಿವಾಹಿನಿಗಳ ಜೊತೆ ಚರ್ಚೆ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಆದೇಶ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ್ದಾರೆ ಅವರು.

Bar & Bench

ಪಶ್ಚಿಮ ಬಂಗಾಳದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಹಗರಣ ಕುರಿತಂತೆ ಹೂಡಲಾಗಿದ್ದ ಪ್ರಕರಣದ ವಿಚಾರವಾಗಿ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠದ ನಡುವಿನ ವಾಗ್ವಾದಕ್ಕೆ ಕಲ್ಕತ್ತಾ ಹೈಕೋರ್ಟ್‌ ಈಚೆಗೆ ಸಾಕ್ಷಿಯಾಗಿದೆ.

ಇಡೀ ವಿವಾದದ ಕೇಂದ್ರಬಿಂದುವಾಗಿರುವ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಇಂತಹ ವಿವಾದಗಳಿಗೆ ಹೊಸಬರಲ್ಲ.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ತಮ್ಮ ಇತ್ತೀಚಿನ ಆದೇಶದಲ್ಲಿ, ವಿಭಾಗೀಯ ಪೀಠದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು "ಪ. ಬಂಗಾಳದ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದಿದ್ದರು. ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾ. ಸೇನ್ ಅವರು ಹೊರಡಿಸಿದ ಆದೇಶಗಳನ್ನು ಪರಿಶೀಲಿಸುವಂತೆ ನ್ಯಾ. ಗಂಗೋಪಾಧ್ಯಾಯ ಅವರು ಸುಪ್ರೀಂ ಕೋರ್ಟನ್ನು ಒತ್ತಾಯಿಸಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ. ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು. ಈ ಆದೇಶಕ್ಕೆ ನ್ಯಾ. ಸೇನ್‌ ನೇತೃತ್ವದ ವಿಭಾಗೀಯ ಪೀಠ ತಡೆ ನೀಡಿತ್ತು.

ತಡೆಯಾಜ್ಞೆಯ ಹೊರತಾಗಿಯೂ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಿದ ನ್ಯಾ. ಗಂಗೋಪಾಧ್ಯಾಯ ಅವರು ತನ್ನ ಆದೇಶಕ್ಕೆ ಹೇಗೆ ತಡೆ ನೀಡಲು ಸಾಧ್ಯ ಎಂದು ಪ್ರಶ್ನಿಸಿ ಆದೇಶ ಹೊರಡಿಸಿದ್ದರು. ವಿಭಾಗೀಯ ಪೀಠದ ಆದೇಶ ಕಾನೂನುಬಾಹಿರವಾಗಿರುವುದರಿಂದ ಅದನ್ನು ನಿರ್ಲಕ್ಷಿಸುವಂತೆ ಸಿಬಿಐಗೆ ಸೂಚಿಸಿದ್ದರು.

ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ಇರುವುದರಿಂದ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ನ್ಯಾ. ಸೇನ್‌ ಅವರು ನ್ಯಾ. ಅಮೃತಾ ಸಿನ್ಹಾ ಅವರಿಗೆ ಸೂಚನೆ ನೀಡಿದ್ದಾರೆ ಎಂಬುದು ಅವರ ಆರೋಪವಾಗಿತ್ತು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿರುವುದು ಇದೇ ಮೊದಲಲ್ಲ.

ಮೇ 2018ರಿಂದ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಅವರು ವಿಸ್ತೃತ ಪೀಠದ ಆದೇಶಗಳ ನಿರ್ಲಕ್ಷ್ಯ, ರಾಜಕೀಯ ವಿಷಯಗಳ ಬಗ್ಗೆ ಸುದ್ದಿವಾಹಿನಿಗಳ ಜೊತೆ ಚರ್ಚೆ ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಸೂಚನೆ ನೀಡುವ ಮೂಲಕ ನ್ಯಾಯಾಂಗ ಶಿಸ್ತಿನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿದ್ದಾರೆ. ಅಂತಹ ವಿವಾದಾತ್ಮಕ ತೀರ್ಪುಗಳ ವಿವರ ಇಲ್ಲಿದೆ.

ಟಿವಿ ಚಾನೆಲ್‌ಗೆ ಸಂದರ್ಶನ ಮತ್ತು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೇ ಆದೇಶ

ಏಪ್ರಿಲ್ 2023ರಲ್ಲಿ, ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ಗಂಗೋಪಾಧ್ಯಾಯ ಅವರು ಹಗರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ಸ್ಥಳೀಯ ಬಂಗಾಳಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಟಿವಿ ಚಾನೆಲ್‌ಗೆ ಸಂದರ್ಶನ ನೀಡುವುದು ಹಾಲಿ ನ್ಯಾಯಮೂರ್ತಿಗಳ ಕೆಲಸವಲ್ಲ ಎಂದಿತ್ತು.

ನ್ಯಾ. ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಲ್ಕತ್ತಾ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಂದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ವರದಿ ಕೇಳಿತ್ತು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದು ನಿಜವಾಗಿದ್ದರೆ, ಅರ್ಜಿಗಳ ವಿಚಾರಣೆ ಮುಂದುವರಿಸಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ತರುವಾಯ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಿಜೆಐ ಆದೇಶಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಬಂಗಾಳಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ವರದಿ ಮತ್ತು ಅಧಿಕೃತ ಅನುವಾದವನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.

ಪರಿಣಾಮ ಅದೇ ದಿನ ಸಂಜೆ ವಿಶೇಷ ಅಧಿವೇಶನ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ವಿಭಾಗೀಯ ಪೀಠ ಇಂತಹ ಆದೇಶ 'ನ್ಯಾಯಾಂಗ ಶಿಸ್ತಿಗೆ ವಿರುದ್ಧʼ ಎಂದಿತ್ತು.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ

ಪಕ್ಷಕಾರರನ್ನು ಕೇಳದೆ ಆದೇಶ ರವಾನೆ

ಪಶ್ಚಿಮ ಬಂಗಾಳದಲ್ಲಿ ಸೂಕ್ತ ನಿಯಮ ಪಾಲಿಸದೆ ಇರುವುದರಿಂದ 36,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಮೇ 13, 2023 ರಂದು, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ರದ್ದುಗೊಳಿಸಿದ್ದರು.

ತಮ್ಮ ಆದೇಶದಲ್ಲಿ ಅವರು "ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣದ ಭ್ರಷ್ಟಾಚಾರ ಎಂದಿಗೂ ನಡೆದಿರಲಿಲ್ಲ. ಮಾಜಿ ಶಿಕ್ಷಣ ಸಚಿವರು, ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಲವು ಮಧ್ಯವರ್ತಿಗಳ ಮೂಲಕ ಉದ್ಯೋಗಗಳನ್ನು ಸರಕಿನಂತೆ ಮಾರಾಟ ಮಾಡಲಾಯಿತು, ಅವರೀಗ ಕಂಬಿ ಎಣಿಸುತ್ತಿದ್ದಾರೆ. ಸಿಬಿಐ ಮತ್ತು ಇ ಡಿ ತನಿಖೆಯನ್ನು ಈಗ ಪೂರ್ಣ ಪ್ರಮಾಣದಲ್ಲಿ ಮುಂದುವರೆಸಬಹುದು”ಎಂದಿದ್ದರು.

ಆದೇಶವನ್ನು ನ್ಯಾಯಮೂರ್ತಿ ಸುಬ್ರತಾ ತಾಲೂಕ್ದಾರ್ ನೇತೃತ್ವದ ವಿಭಾಗೀಯ ಪೀಠ ತಡೆಹಿಡಿದಿತ್ತಾದರೂ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಸುವಂತೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಗೆ (ಡಬ್ಲ್ಯುಬಿಬಿಪಿಇ) ನೀಡಿದ ನಿರ್ದೇಶನವನ್ನು ಎತ್ತಿ ಹಿಡಿದಿತ್ತು.

ವಿಭಾಗೀಯ ಪೀಠದ ಆದೇಶವನ್ನು ಅಂತಿಮವಾಗಿ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಶಿಕ್ಷಕರ ವಾದ ಆಲಿಸದೆ ನ್ಯಾ. ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ ಎಂದು ಅದು ಆಗ ಅಭಿಪ್ರಾಯಪಟ್ಟಿತ್ತು.

'ಭಾವೋದ್ವೇಗದಿಂದ ಪ್ರಭಾವಿತ'

ರೂ 50 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ದಾಖಲೆಗಳನ್ನು ಸಿಬಿಐ ಮತ್ತು ಜಾರಿ ನಿರ್ದೇಶನಲಾಯಕ್ಕೆ ಹಸ್ತಾಂತರಿಸದ ಪ. ಬಂಗಾಳ ಸಿಐಡಿಗೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸೆಪ್ಟೆಂಬರ್ 18, 2023ರಂದು ರೂ 5 ಲಕ್ಷ ದಂಡ ವಿಧಿಸಿದ್ದರು.

ತನಿಖೆಯನ್ನು ಸಿಬಿಐ ಮತ್ತು ಇಡಿಗೆ ವಹಿಸಲು ಸಿಐಡಿ ಏಕೆ ಆಸಕ್ತಿ ತೋರುತ್ತಿಲ್ಲ. ಸಾರ್ವಜನಿಕರಿಂದ ಸಿಐಡಿ ಮುಚ್ಚಿಟ್ಟಿದ್ದ ಸಂಗತಿಗಳು ಬೆಳಕಿಗೆ ಬರುತ್ತವೆ ಎಂದು ಭಯವೇ ಎಂಬುದಾಗಿ ಅವರು ಪ್ರಶ್ನಿಸಿದ್ದರು.

ಆದರೆ, ನ್ಯಾಯಮೂರ್ತಿಗಳಾದ ಸಬ್ಯಸಾಚಿ ಭಟ್ಟಾಚಾರ್ಯ ಮತ್ತು ಉದಯ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಸೆಪ್ಟೆಂಬರ್ 23ರಂದು ಈ ಆದೇಶ ಬದಿಗೆ ಸರಿಸಿತು. ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು 'ಭಾವೋದ್ವೇಗದಿಂದ ಪ್ರಭಾವಿತರಾಗಿರಬಹುದು' ಎಂದು ಅದು ಹೇಳಿತು.

ಸಿಬಿಐ, ಇಡಿ ಅಧಿಕಾರಿಗಳ ರಕ್ಷಣೆ

ಶಾಲಾ ನೇಮಕಾತಿ ಹಗರಣದ ಸಿಬಿಐ ತನಿಖೆಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂಬ ಆದೇಶ ಜಾರಿಗೆ ತರಲು ವಿಫಲವಾದ ಕಾರಣಕ್ಕೆ ಪ. ಬಂಗಾಳ ಕಾನೂನು ಸಚಿವ ಮೊಲೊಯ್‌ ಘಟಕ್‌ ಅವರಿಗೆ ನ್ಯಾ. ಗಂಗೋಪಾಧ್ಯಾಯ ಸಮನ್ಸ್‌ ನೀಡಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ಅಧಿಕಾರಿಗಳ ವಿರುದ್ಧ ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯದ ಹಾಲಿ ನ್ಯಾಯಾಧೀಶ ಅಪರ್ಣ್‌ ಚಟರ್ಜಿ ಅವರನ್ನು ನ್ಯಾ. ಗಂಗೋಪಾಧ್ಯಾಯ ತರಾಟೆಗೆ ತೆಗೆದುಕೊಂಡಿದ್ದರು. ಚಟರ್ಜಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಅವರು ಆದೇಶಿಸಿದ್ದರು.

ಇದಲ್ಲದೆ, ಶಾಲಾ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಸದಸ್ಯರ ವಿರುದ್ಧ ಯಾವುದೇ ಅಧಿಕಾರಿಗಳು ಯಾವುದೇ ದೂರು ನೀಡುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನ್ಯಾ. ಗಂಗೋಪಾಧ್ಯಾಯ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರು.

ಹೈಕೋರ್ಟ್ ವಕೀಲರ ಸಂಘದ ವಿರುದ್ಧ ವಾಗ್ದಾಳಿ

ಡಿಸೆಂಬರ್ 2023 ರಲ್ಲಿ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ವಕೀಲ ಪ್ರೊಸೆನ್ಜಿತ್ ಮುಖರ್ಜಿ ಅವರನ್ನು ನ್ಯಾಯಾಲಯದಿಂದಲೇ ಬಂಧಿಸಲು ಆದೇಶಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಲ್ಕತ್ತಾ ಹೈಕೋರ್ಟ್ ವಕೀಲರ ಸಂಘ ನ್ಯಾ. ಗಂಗೋಪಾಧ್ಯಾಯ ಅವರ ಎಲ್ಲಾ ನ್ಯಾಯಾಂಗ ಕಾರ್ಯಗಳನ್ನು ಹಿಂಪಡೆಯುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ವಿನಂತಿಸಿತು.

ನಂತರ ಹಾನಿ ಸರಿಪಡಿಸಲು ಮುಂದಾದ ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠ ವಿಶೇಷ ವಿಚಾರನೆ ನಡೆಸಿ ವಕೀಲರ ಬಿಡುಗಡೆಗೆ ಆದೇಶಿಸಿತು.

ಹೈಕೋರ್ಟ್ ವಕೀಲರ ಸಂಘ ಅನಧಿಕೃತವಾಗಿ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿತು. ಇದರಿಂದಾಗಿ ವಕೀಲರ ಸಂಘದ ಕಚೇರಿಗೆ ತೆರಳಿದ್ದ ನ್ಯಾ. ಗಂಗೋಪಾಧ್ಯಾಯ ಅವರು ತಮ್ಮ ಆದೇಶದ ಹಿಂದಿನ ಕಾರಣಗಳನ್ನು ವಿವರಿಸಿದ್ದರು.

ನ್ಯಾ. ಗಂಗೋಪಾಧ್ಯಾಯ ಅವರ ಇತ್ತೀಚಿನ ವಿವಾದ ಸರ್ವೋಚ್ಚ ನ್ಯಾಯಾಲಯದ ಗಮನ ಸೆಳೆದಿದೆ. ಶನಿವಾರ ಜಾತಿ ಪ್ರಮಾಣಪತ್ರ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ ನಡೆಸುತ್ತಿದ್ದ ಎಲ್ಲಾ ವಿಚಾರಣೆಗಳಿಗೆ ಶನಿವಾರ ತಡೆ ನೀಡಿತ್ತು. ಈ ಘಟನೆ ಮತ್ತು ಹಿಂದೆ ನಡೆದಿರುವ ಘಟನೆಗಳಿಗೆ ಸುಪ್ರೀಂ ಕೋರ್ಟ್‌ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾಲವೇ ಹೇಳಲಿದೆ.