ನ್ಯಾಯಮೂರ್ತಿ ಎ.ಎಸ್.ಓಕಾ
ನ್ಯಾಯಮೂರ್ತಿ ಎ.ಎಸ್.ಓಕಾ 
ಸುದ್ದಿಗಳು

ನ್ಯಾಯಾಂಗದ ಮೇಲಿನ ನಂಬಿಕೆ ಗಣನೀಯವಾಗಿ ಕುಸಿದಿದೆ; ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆಹಚ್ಚಬೇಕು: ನ್ಯಾ. ಓಕಾ

Bar & Bench

ಗುಣಮಟ್ಟದ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆ ಗಣನೀಯವಾಗಿ ಕ್ಷೀಣಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ಯಾಮಲಾ ಪಪ್ಪು ಸ್ಮಾರಕ ಎರಡನೇ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತೀಯ ಸಂವಿಧಾನದ 75 ವರ್ಷಗಳ ಸಂದರ್ಭದಲ್ಲಿ ನ್ಯಾಯದ ಲಭ್ಯತೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ನ್ಯಾಯಾಂಗ ಎಲ್ಲಿ ಎಡವಿದೆ ಎಂಬುದನ್ನು ಕಂಡುಹಿಡಿಯುವ ಸಂಬಂಧ ಸಂಶೋಧನೆ ಮತ್ತು ಮಾಹಿತಿಯ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ನ್ಯಾ. ಓಕಾ ಅವರ ಉಪನ್ಯಾಸದ ಪ್ರಮುಖಾಂಶಗಳು

  • ನ್ಯಾಯಾಧೀಶರು ದಂತ ಗೋಪುರಗಳಲ್ಲಿ ವಾಸಿಸಬಾರದು ಎಂಬುದು ನನ್ನ ಯಾವತ್ತಿನ ನಂಬಿಕೆ.

  • ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನ್ಯಾಯಾಂಗ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸಿಲ್ಲ ಮತ್ತು ಈ ನಿಟ್ಟಿನಲ್ಲಿ ಹಿಂದುಳಿದಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

  • ಜನ ಈ ಹಿಂದೆ ನ್ಯಾಯಾಂಗದ ಮೇಲಿಟ್ಟಿದ್ದ ನಂಬಿಕ ವಿವಿಧ ಕಾರಣಗಳಿಂದಾಗಿ ಗಣನೀಯವಾಗಿ ಕ್ಷೀಣಿಸಿದೆ.

  • ಮುಖ್ಯವಾಗಿ ನಮಗೆ ನ್ಯಾಯವನ್ನು ಗುಣಾತ್ಮಕವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ.

  • ನಾವು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ನಮ್ಮ ವಿವೇಚನೆ ಬಳಸಿಲ್ಲ.

  • ಆದರ್ಶಪ್ರಾಯವಾಗಿ ಏನನ್ನು ಸಾಧಿಸಬೇಕಿತ್ತು ಎಂಬುದನ್ನು ಪತ್ತೆ ಹಚ್ಚಬೇಕಿದೆ.

  • ನ್ಯಾಯಾಂಗ ಜನರ ಆಶೋತ್ತರಗಳಿಗೆ ತಕ್ಕಂತೆ ಇಲ್ಲದಿರುವುದು ಕೂಡ ವಿಚಾರಣಾ ನ್ಯಾಯಾಲಯಗಳು ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಒಂದು ಕಾರಣ.

  • ಜಿಲ್ಲೆಗಳಲ್ಲಿ ನ್ಯಾಯಾಲಯಗಳೇ ಅಸ್ತಿತ್ವದಲ್ಲಿಲ್ಲವೆಂಬಂತೆ ಜನ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳ ಬಗ್ಗೆಯಷ್ಟೇ ಮಾತನಾಡುತ್ತಾರೆ.

  • ಹಲವು ವರ್ಷಗಳಿಂದ ವಿಚಾರಣಾ ನ್ಯಾಯಾಲಯಗಳನ್ನು ಕೆಳ ಅಥವಾ ಅಧೀನ ನ್ಯಾಯಾಲಯಗಳು ಎಂದು ಕರೆಯಲಾಗುತ್ತಿದ್ದರೂ ಪ್ರತಿಯೊಂದು ನ್ಯಾಯಾಲಯವೂ ನ್ಯಾಯಾಲಯವೇ ಆಗಿದೆ.

  • ಸಾಂವಿಧಾನಿಕ ನ್ಯಾಯಾಲಯಗಳ ಕಾರ್ಯವನ್ನೇ ವಿಚಾರಣಾ ನ್ಯಾಯಾಲಯಗಳೂ ಮಾಡುವುದರಿಂದ ಯಾವುದೇ ಕೀಳರಿಮೆ ಅಗತ್ಯವಿಲ್ಲ.

  • ಆಡಳಿತ ನಡೆಸುವ ಕಾರಣಕ್ಕೆ ಶ್ರೇಣೀಕರಣ ಇರಬಹುದಾದರೂ ಸಾಮಾನ್ಯ ಜನರಿಗೆ ನ್ಯಾಯ ಸಿಗುವ ನಿಜವಾದ ಸ್ಥಳಗಳೆಂದರೆ ವಿಚಾರಣಾ ನ್ಯಾಯಾಲಯಗಳೇ ಆಗಿವೆ.

  • ವಿಚಾರಣಾ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಪರಿಣಾಮ ವೈವಾಹಿಕ ವ್ಯಾಜ್ಯಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ.

  • ವ್ಯಾಜ್ಯ ಪೂರ್ವ ಸಂಧಾನ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದ್ದು ಅದಕ್ಕೆ ಕಾಯಿದೆಯ ಬೆಂಬಲ ಬೇಕಿದೆ.

ಶ್ಯಾಮಲಾ ಪಪ್ಪು ಸ್ಮಾರಕ ಉಪನ್ಯಾಸ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಆದಿಶ್ ಅಗರ್ವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.