ಪೌರತ್ವ ತಿದ್ದುಪಡಿ ಕಾಯಿದೆ 2019 (ಸಿಎಎ) ವಿರುದ್ಧದ ಪ್ರತಿಭಟನೆ ಮತ್ತು ಈಶಾನ್ಯ ದೆಹಲಿಯಲ್ಲಿ ಈ ಸಂಬಂಧ ಸಂಭವಿಸಿದ ಗಲಭೆಗಳ ಬಗ್ಗೆ ತನಿಖೆ ನಡೆಸಿ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ಅವರನ್ನು ಪರಿಹಾರ ಆಯುಕ್ತರನ್ನಾಗಿ (ಕ್ಲೈಮ್ ಕಮಿಷನರ್ )ಆಗಿ ನೇಮಿಸಲಾಗಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನೇಮಕಾತಿಗೆ ಅನುಮೋದನೆ ನೀಡಿದ್ದು ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು ನ್ಯಾ. ಆಶಾ ಅವರನ್ನು ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಆರು ತಿಂಗಳ ಕಾಲ ಹುದ್ದೆಗೆ ನೇಮಕ ಮಾಡಿದರು.
"ದೆಹಲಿ ಈಶಾನ್ಯ ಜಿಲ್ಲೆ ಮತ್ತು ದೆಹಲಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ಹಾಗೂ ನಂತರದ ಗಲಭೆಗಳಿಗೆ ಸಂಬಂಧಿಸಿದ ಹಾನಿತನಿಖೆ ನಡೆಸಿ ಪರಿಹಾರ ಒದಗಿಸಲು ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ಅವರನ್ನು ಪರಿಹಾರ ಆಯುಕ್ತರನ್ನಾಗಿ ನೇಮಿಸಲು ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಸಂತೋಷಪಟ್ಟಿದ್ದಾರೆ. 01.12.2023 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ, ಅಗತ್ಯವಿದ್ದರೆ ಮತ್ತಷ್ಟು ಅವಧಿಗೆ ವಿಸ್ತರಣೆ ಮಾಡಲಾಗುವುದು" ಎಂದು ದೆಹಲಿ ಸರ್ಕಾರ ಹೊರಡಿಸಿದ ಡಿಸೆಂಬರ್ 8ರ ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಆಶಾ ಮೆನನ್ ಅವರು ಕ್ಲೈಮ್ ಕಮಿಷನರ್ ಆಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಒದಗಿಸಬೇಕಾದ ಸೌಲಭ್ಯಗಳನ್ನು ಸಹ ಆದೇಶದಲ್ಲಿ ನಿಗದಿಪಡಿಸಲಾಗಿದೆ. ಇದು ಸೆಕ್ರೆಟರಿಯಲ್ ನೆರವು, ಚಾಲಕ,ತ ವಾಹನ, ಅಗತ್ಯ ಕಚೇರಿ ಮತ್ತು ಸಿಬ್ಬಂದಿ, ಭದ್ರತೆ ಮತ್ತು ತನ್ನ ಕೆಲಸ ನಿರ್ವಹಿಸಲು ಅಗತ್ಯವಿರುವ ಇತರ ಅವಶ್ಯಕತೆಗಳಿಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಸಿಎಎ,ವಿರುದ್ಧದ ಪ್ರತಿಭಟನೆ ನಡೆದಾಗ ಈಶಾನ್ಯ ದೆಹಲಿ 2020 ರಲ್ಲಿ ಗಲಭೆಗಳಿಗೆ ಸಾಕ್ಷಿಯಾಯಿತು. ಫೆ. 22ರಿಂದ 26ರವರೆಗೆ ನಡೆದ ಹಿಂಸಾಚಾರದ ವೇಳೆ 53 ಜನರು ಸಾವನ್ನಪ್ಪಿ 530 ಮಂದಿ ಗಾಯಗೊಂಡಿದ್ದರು. ಅವರಲ್ಲಿ 106 ಪೊಲೀಸರು ಕೂಡ ಸೇರಿದ್ದರು ಎಂದು ದೆಹಲಿ ಪೊಲೀಸರು 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. 16,381 ಪಿಸಿಆರ್ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ನಂತರ ಮಾಹಿತಿ ನೀಡಲಾಗಿತ್ತು.
ರಾಜಕೀಯ ನಾಯಕರು ಮತ್ತು ದೆಹಲಿ ಮೂಲದ ಹೋರಾಟಗಾರರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ (ಯುಎಪಿಎ) ಅಡಿ ನಂತರ ದೂರು ದಾಖಲಿಸಲಾಗಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]