ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ವಿಚಕ್ಷಣಾ ರಿಜಿಸ್ಟ್ರಾರ್ ಹುದ್ದೆಗೆ ಹಾಲಿ ನ್ಯಾಯಿಕ ರಿಜಿಸ್ಟ್ರಾರ್ ಆಗಿ ಆಧಿಕೃತ ಕರ್ತವ್ಯದಲ್ಲಿರುವ (ಒಒಡಿ) ಜಿಲ್ಲಾ ನ್ಯಾಯಾಧೀಶರಾದ ಕೆ ಎಸ್ ಭರತ್ ಕುಮಾರ್ ಅವರನ್ನು ಒಒಡಿಯಾಗಿ ವರ್ಗಾವಣೆ ಮಾಡಲಾಗಿದೆ. ವಿಚಕ್ಷಣಾ ರಿಜಿಸ್ಟ್ರಾರ್ ಆಗಿರುವ ಎಸ್ ವೈ ವಟವಟಿ ಅವರು ಏಪ್ರಿಲ್ 29ರಂದು ನಿವೃತ್ತಿ ಹೊಂದಲಿದ್ದಾರೆ.
ಬೆಂಗಳೂರು ಪೀಠದ ನ್ಯಾಯಿಕ ರಿಜಿಸ್ಟ್ರಾರ್ ಹುದ್ದೆಗೆ ಧಾರವಾಡ ಪೀಠದಲ್ಲಿ ಹೆಚ್ಚುವರಿ ನ್ಯಾಯಿಕ ರಿಜಿಸ್ಟ್ರಾರ್ ಆಗಿದ್ದ ಜೈಶಂಕರ್ ಅವರನ್ನು ನೇಮಕ ಮಾಡಿ, ವರ್ಗಾಯಿಸಲಾಗಿದೆ. ಧಾರವಾಡ ಪೀಠದ ಹೆಚ್ಚುವರಿ ನ್ಯಾಯಿಕ ರಿಜಿಸ್ಟ್ರಾರ್ ಹುದ್ದೆಗೆ ಬೆಂಗಳೂರು ನಗರದ 51ನೇ ಹೆಚ್ಚುವರಿ ಸಿಟಿ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ಆರ್ ಹುಲಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ನ್ಯಾಯಾಧೀಶರಾದ ಭರತ್ ಕುಮಾರ್ ಜೈಶಂಕರ್ ಮತ್ತು ವೆಂಕಟೇಶ್ ಆರ್ ಹುಲಗಿ ಅವರಿಗೆ ಏಪ್ರಿಲ್ 29ರಂದು ಅಧಿಕಾರ ಸ್ವೀಕರಿಸಲು ನಿರ್ದೇಶಿಸಲಾಗಿದೆ.
ಕಲಬುರ್ಗಿ ಪೀಠದ ಹೆಚ್ಚುವರಿ ನ್ಯಾಯಿಕ ರಿಜಿಸ್ಟ್ರಾರ್ ಹುದ್ದೆಗೆ ಶಿವಮೊಗ್ಗದ ಎಫ್‌ಟಿಸಿಎಸ್-1ರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ದಯಾನಂದ ವಿ ಎಚ್ ಅವರನ್ನು ನೇಮಕ ಮಾಡಿ, ವರ್ಗಾಯಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಶ್ರೀನಿವಾಸ ಸುವರ್ಣ ಅವರನ್ನು ವರ್ಗಾವಣೆ ಮಾಡಲಾಗಿದೆ.
ರಾಜ್ಯದ 12 ಪ್ರಧಾನ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು (ಪಿಡಿಜೆ) ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಅನಿಲ್ ಭೀಮಸೇನ್ ಕಟ್ಟಿ ಅವರು ಇದೇ ಏಪ್ರಿಲ್ 30ರಂದು ನಿವೃತ್ತರಾಗುತ್ತಿದ್ದು, ಅವರ ಸ್ಥಾನಕ್ಕೆ ಬೆಳಗಾವಿಯ ಪಿಡಿಜೆ ಚಂದ್ರಶೇಖರ್ ಮೃತ್ಯುಂಜಯ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿ ವರ್ಗಾವಣೆಗೊಂಡಿದ್ದ ಪಿಡಿಜೆ ಮಲ್ಲಿಕಾರ್ಜುನ ಗೌಡ ಅವರ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ಪಿಡಿಜೆ ತ್ಯಾಗರಾಜ ಎನ್. ಇನವಲ್ಲಿ ಅವರನ್ನು ನೇಮಕ ಮಾಡಲಾಗಿದೆ. ಮಲ್ಲಿಕಾರ್ಜುನ ಗೌಡ ಅವರನ್ನು ವಿಶೇಷ ಕರ್ತವ್ಯದ ಮೇಲೆ ಬೆಂಗಳೂರಿನ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರನ್ನಾಗಿ ಫೆಬ್ರವರಿಯಲ್ಲಿ ವರ್ಗಾವಣೆ ಮಾಡಲಾಗಿತ್ತು.
ಬೆಳಗಾವಿಯ ಪಿಡಿಜೆಯಾಗಿ ಮಂಗಳೂರು ಪಿಡಿಜೆ ಮುರಳೀಧರ್ ಪೈ ಬಿ, ರಾಮನಗರ ಪಿಡಿಜೆ ಬಿ ಜಿ ರಮಾ ಅವರನ್ನು ಮಂಡ್ಯ ಪಿಡಿಜೆ, ಉಡುಪಿಯ ಪಿಡಿಜೆ ಸುಬ್ರಮಣ್ಯ ಜೆ ಎನ್ ಅವರನ್ನು ಬೆಂಗಳೂರು ಗ್ರಾಮಾಂತರದ ಪಿಡಿಜೆ, ಕಾರವಾರದ ಪಿಡಿಜೆ ಸಿ ರಾಜಶೇಖರ ಅವರನ್ನು ಚಿಕ್ಕಬಳ್ಳಾಪುರ ಪಿಡಿಜೆಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರನ್ನು ಗದಗ ಪಿಡಿಜೆಯಾಗಿ, ಕೊಪ್ಪಳ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಬಿ ಎಸ್ ರೇಖಾ ಅವರನ್ನು ಕೊಪ್ಪಳದ ಪಿಡಿಜೆಯನ್ನಾಗಿ, ರಾಮನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಿಂಗಪ್ಪ ಪರಶುರಾಮ್ ಕೋಪರ್ದೆ ಅವರನ್ನು ರಾಮನಗರ ಪಿಡಿಜೆಯನ್ನಾಗಿ, ಬೆಂಗಳೂರು 26ನೇ ಹೆಚ್ಚುವರಿ ನಗರ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯ ಕುಮಾರ್ ಅವರನ್ನು ಕಾರವಾಡದ ಪಿಡಿಜೆಯನ್ನಾಗಿ, ತುಮಕೂರು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಅವರನ್ನು ಉಡುಪಿ ಪಿಡಿಜೆಯನ್ನಾಗಿ ಹಾಗೂ ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರನ್ನು ಮಂಗಳೂರು ಪಿಡಿಜೆಯನ್ನಾಗಿ ನೇಮಕ ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಿಂಕರೇ ಗೌಡ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ 127 ಜಿಲ್ಲಾ ನ್ಯಾಯಾಧೀಶರ ಶ್ರೇಣಿ, 117 ಹಿರಿಯ ಸಿವಿಲ್ ನ್ಯಾಯಾಧೀಶರ ಶ್ರೇಣಿ ಹಾಗೂ 239 ಸಿವಿಲ್ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಧೀಶರನ್ನು ರಾಜ್ಯದ ವಿವಿಧ ನ್ಯಾಯಾಲಯಗಳು, ನ್ಯಾಯಾಧಿಕರಣಗಳಿಗೆ ವರ್ಗಾವಣೆ ಮಾಡಲಾಗಿದ್ದು, ಮೇ 23ರೊಳಗೆ ಅಧಿಕಾರ ಸ್ವೀಕರಿಸಲು ಆದೇಶ ಮಾಡಲಾಗಿದೆ.