ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂನ ಹಾಲಿ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಇಂದು ಸೇವೆಯಿಂದ ನಿವೃತ್ತರಾಗಲಿದ್ದು ಮುಂದಿನ ಕೆಲ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ಪ್ರಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಬಿ ವಿ ನಾಗರತ್ನ ಅವರು ಮೇ 25ರಿಂದ ಕೊಲಿಜಿಯಂನ ಭಾಗವಾಗಲಿದ್ದಾರೆ.
ಸುಪ್ರೀಂ ಕೋರ್ಟ್‌ನ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಕೊಲಿಜಿಯಂ, ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಜೊತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ನಿರ್ಧರಿಸುವ ಜವಾಬ್ದಾರಿ ಹೊಂದಿದೆ. ಇದರ ಮೂವರು ಅತಿ ಹಿರಿಯ ನ್ಯಾಯಮೂರ್ತಿಗಳು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಸಿಜೆಐ ಗವಾಯಿ ಅವರ ಅಧಿಕಾರಾವಧಿ ಪ್ರಾರಂಭವಾದಾಗ, ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಇದ್ದರು.
ನ್ಯಾಯಮೂರ್ತಿ ಓಕಾ ಅವರು ಇಂದು, (ಮೇ 24) ಹುದ್ದೆಯಿಂದ ನಿವೃತ್ತರಾಗಲಿದ್ದು, ಕೊಲಿಜಿಯಂನ ಒಂದು ಸ್ಥಾನ ತೆರವಾಗಲಿದೆ.
ಈಗ ಐದನೇ ಹಿರಿಯ ನ್ಯಾಯಮೂರ್ತಿಯಾಗಿರುವ ನಾಗರತ್ನ ಅವರು ನಾಳೆಯಿಂದ ಅಧಿಕೃತವಾಗಿ ಕೊಲಿಜಿಯಂನ ಭಾಗವಾಗಲಿದ್ದಾರೆ. 2027ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗುವವರೆಗೆ ಅದರ ಭಾಗವಾಗಿ ಸೇವೆ ಸಲ್ಲಿಸಲಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ನ್ಯಾಯಮೂರ್ತಿ ನಾಗರತ್ನ ಅವರು ಸುಪ್ರೀಂ ಕೋರ್ಟ್ 19ನೇ ಮುಖ್ಯ ನ್ಯಾಯಮೂರ್ತಿಗಳಾದ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ.