Karnataka HC, DNA Networks & Justice John Michael D'Cunha 
ಸುದ್ದಿಗಳು

[ಕಾಲ್ತುಳಿತ ಪ್ರಕರಣ] ನ್ಯಾ. ಕುನ್ಹಾ ವರದಿ ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ವಾಗ್ದಾನ

“ಅರ್ಜಿದಾರರೇನು ಕ್ರಿಮಿನಲ್‌ಗಳಲ್ಲ. ವರದಿಯಲ್ಲಿನ ಅಭಿಪ್ರಾಯ ಆಘಾತಕಾರಿಯಾಗಿದೆ” ಎಂದು ಹೇಳಿದ ನ್ಯಾಯಾಲಯ.

Bar & Bench

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಚಾರಣಾ ಆಯೋಗದ ವರದಿಯನ್ನು ರದ್ದುಪಡಿಸಲು ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ರದ್ದುಪಡಿಸುವಂತೆ ಕೋರಿ ಆರ್‌ಸಿಬಿ ವಿಜಯೋತ್ಸವ ಆಚರಣೆಯ ಸಮಾರಂಭ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ ಸಂಸ್ಥೆಯ ನಿರ್ದೇಶಕ ಸುನೀಲ್‌ ಮ್ಯಾಥ್ಯೂ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್‌ ಬ್ಯಾನರ್ಜಿ ಮತ್ತು ಉಮೇಶ್‌ ಎಂ. ಅಡಿಗ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಬಿ ಕೆ ಸಂಪತ್‌ ಕುಮಾರ್‌ ಅವರು, “ನ್ಯಾ. ಕುನ್ಹಾ ಅವರ ಆಯೋಗವು ಅರ್ಜಿದಾರರ ವಾದ ಆಲಿಸದೆ ಮತ್ತು ಪ್ರಕರಣದ ಸಾಕ್ಷಿಗಳನ್ನು ಪಾಟೀ ಸವಾಲು ನಡೆಸಲು ತಮಗೆ ಅವಕಾಶ ನೀಡದೆ ಏಪಕ್ಷೀಯವಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಿಲ್ಲ. ಆದರೆ, ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಂದ ಅರ್ಜಿದಾರರ ಘನತೆಗೆ ಧಕ್ಕೆಯಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರೇನು ಕ್ರಿಮಿನಲ್‌ಗಳಲ್ಲ. ವರದಿಯಲ್ಲಿನ ಅಭಿಪ್ರಾಯ ಆಘಾತಕಾರಿಯಾಗಿದೆ ಎಂದು ನುಡಿಯಿತು.

ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸದ್ಯಕ್ಕೆ ನ್ಯಾ. ಜಾನ್ ಮೈಕೆಲ್ ಕುನ್ಹಾ ವರದಿ ಬಹಿರಂಗಪಡಿಸುವುದಿಲ್ಲ. ಹೀಗಾಗಿ, ವರದಿ ಬಗ್ಗೆ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು” ಎಂದು ಕೋರಿದರು.

ಈ ಹೇಳಿಕೆ ಪರಿಗಣಿಸಿದ ಪೀಠವು “ನ್ಯಾ.ಕುನ್ಹಾ ಅವರ ವರದಿಗೆ ತಡೆಯಾಜ್ಞೆ ನೀಡಬೇಕು. ತನಿಖೆ ಆಧರಿಸಿ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ” ಎಂದು ತಿಳಿಸಿತು.

ಅಂತೆಯೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿತು.