ಸುದ್ದಿಗಳು

ಬೌರಿಂಗ್‌ ಆಸ್ಪತ್ರೆಗೆ ನ್ಯಾ. ದಿನೇಶ್‌ಕುಮಾರ್‌ ಭೇಟಿ, ಪರಿಶೀಲನೆ

Bar & Bench

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷರಾದ ಹೈಕೋರ್ಟ್‌ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಅವರು ಬುಧವಾರ ಅನೀರಿಕ್ಷಿತವಾಗಿ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.

ಹೊರರೋಗಿಗಳ ವಿಭಾಗದಲ್ಲಿ ಕೌಂಟರ್‌ಗಳ ಸಂಖ್ಯೆ ಕಡಿಮೆ ಇದ್ದು, ಜನರಿಗೆ ತೀವ್ರ ಥರದ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಆಸ್ಪತ್ರೆಯ ಅಧೀಕ್ಷಕ ಡಾ. ಕೆ ಕೆಂಪರಾಜು ಅವರಿಗೆ ಸೂಚಿಸಿದರು.

ಆಸ್ಪತ್ರೆಯ ಸಾಮಾನ್ಯ ವಾರ್ಡ್‌, ಕೋವಿಡ್‌ ವಾರ್ಡ್‌, ಮಕ್ಕಳ ವಾರ್ಡ್‌, ತೀವ್ರ ನಿಗಾ ಘಟಕ, ರಕ್ತ ನಿಧಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳ ಜೊತೆ ಸಮಾಲೋಚಿಸಿ, ಮಾಹಿತಿ ಪಡೆದುಕೊಂಡರು. ಈ ಬಗ್ಗೆ ಕ್ರಮವಹಿಸುವತೆ ಆಸ್ಪತ್ರೆಯ ಡೀನ್‌ ಮತ್ತು ನಿರ್ದೇಶಕರಾದ ಡಾ. ಮನೋಜ್‌ ಕುಮಾರ್‌ ಮತ್ತು ಕೆಂಪರಾಜು ಅವರಿಗೆ ಸೂಚಿಸಿದರು.

ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಬಾಲಸುಬ್ರಮಣಿ ಇದ್ದರು.

ಕೆಎಸ್‌ಎಲ್‌ಎಸ್‌ಎ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಂಥ ಪ್ರಯೋಗಕ್ಕೆ ನ್ಯಾ. ದಿನೇಶ್‌ ಕುಮಾರ್‌ ಅವರು ಮುಂದಾಗಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಬಿ ವೀರಪ್ಪ ಅವರು ಇಂಥ ಅನಿರೀಕ್ಷಿತ ಭೇಟಿಗಳ ಮೂಲಕ ಅಧಿಕಾರಿ ವರ್ಗದಲ್ಲಿ ನಡುಕ ಉಂಟು ಮಾಡುತ್ತಿದ್ದರು.