ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ಜಾತ್ಯತೀತತೆ ಮತ್ತು ಕಾನೂನಾತ್ಮಕ ಆಡಳಿತದ ವಿರುದ್ಧದ ವಿಚಾರಗಳನ್ನು ಬೆಂಬಲಿಸುವ ಮೂಲಕ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ತೆಗೆದುಕೊಂಡಿರುವ ಪ್ರಮಾಣ ವಚನಕ್ಕೆ ದ್ರೋಹವೆಸಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಬಗ್ಗೆ ಕಟು ಟೀಕೆ ಮಾಡಿರುವ ನ್ಯಾ. ಚಂದ್ರು ಅವರು, ನ್ಯಾಯಾಧೀಶರಾಗಿ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಸಹ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ ವಿರುದ್ಧ ಮಾತನಾಡಿದ ನ್ಯಾ. ಸ್ವಾಮಿನಾಥನ್ ಅವರು ಓರ್ವ "ವಿಚಿತ್ರ ವ್ಯಕ್ತಿ" ಎಂದು ಹೇಳಿದರು.
ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ವಕೀಲರ ವಿಭಾಗ ಏರ್ಪಡಿಸಿದ್ದ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ರಕ್ಷಣೆ ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಚಂದ್ರು ಮುಖ್ಯ ಭಾಷಣ ಮಾಡಿದರು.
ಭಾಷಣದ ವೇಳೆ ಅವರು, "ಆ ಜಿ ಆರ್ ಸ್ವಾಮಿನಾಥನ್ ಒಬ್ಬ ವಿಚಿತ್ರ ವ್ಯಕ್ತಿ. ನಾನು ಇದನ್ನು ಹೇಳಲು ಕಾರಣವೆಂದರೆ ಸಂವಿಧಾನದ ಪ್ರಕಾರ, ನಾವು ನ್ಯಾಯಾಧೀಶರಾಗಿ ಆಧಿಕಾರ ಸ್ವೀಕರಿಸುವ ವೇಳೆ 'ನಾನು ಭಯ ಅಥವಾ ಪಕ್ಷಪಾತವನ್ನು ತೋರದೆ, ಕೆಡುಕನ್ನು ಬಯಸದೆ ಸಂವಿಧಾನವನ್ನು ಎತ್ತಿಹಿಡಿಯುತ್ತೇನೆʼ ಎಂದು ನಿಷ್ಠೆಯಿಂದ ಪ್ರಮಾಣವಚನ ಸ್ವೀಕರಿಸಿರುತ್ತೇವೆ. ಆದರೆ ನ್ಯಾ. ಸ್ವಾಮಿನಾಥನ್ ಅದನ್ನು ಉಲ್ಲಂಘಿಸಿದ್ದಾರೆ. ಅದು ಪ್ರಮಾಣವಚನಕ್ಕೆ ವಿರುದ್ಧವಾಗಿದೆ,”ಎಂದು ನ್ಯಾ. ಚಂದ್ರು ಹೇಳಿದರು.
ತಮ್ಮ ಭಾಷಣದಲ್ಲಿ ನ್ಯಾ. ಚಂದ್ರು ಅವರು,"ಹರಿಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ, ನ್ಯಾ. ಸ್ವಾಮಿನಾಥನ್ ಅವರು ಸಂವಿಧಾನವನ್ನು 1935ರ ಭಾರತ ಸರ್ಕಾರ ಕಾಯಿದೆಯಿಂದ ನಕಲು ಮಾಡಲಾಗಿದೆ ಎಂದಿದ್ದಾರೆ. ನಮ್ಮ ಸಂವಿಧಾನದಲ್ಲಿ ಯಾವುದೇ ಸ್ವಂತಿಕೆ ಇಲ್ಲ ಎಂದು ಹೇಳಿದ್ದಾರೆ. ಇಂತಹ ಜನರಿಗೆ ಪ್ರತಿಕ್ರಿಯಿಸಲು ತಮ್ಮ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಡಾ. ಅಂಬೇಡ್ಕರ್ ಅವರೇ ಸ್ವತಃ ಹೇಳಿದ್ದರು. ಆದರೂ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಾಗಿರುವಂತಹವರೊಬ್ಬರು ಈ ರೀತಿ ಮಾತನಾಡುತ್ತಾರೆ, ಅವರ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ" ಎಂದು ಟೀಕಿಸಿದರು.
ಈ ರೀತಿಯ ಹೇಳಿಕೆಗಳು ಡಾ. ಬಿ ಆರ್ ಅಂಬೇಡ್ಕರ್ ಅವರು ಕಲ್ಪಿಸಿಕೊಂಡ -ಸಮಾನತೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ - ಸಾಂವಿಧಾನಿಕ ಸ್ವರೂಪದ ಮೂಲಕ್ಕೇ ಗುರಿ ಇಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
"ಅಂಬೇಡ್ಕರ್ ಅವರ ಪರಂಪರೆಯನ್ನು ಧಿಕ್ಕರಿಸುವವರು ಮತ್ತು ಕಾನೂನಾತ್ಮಕ ಆಡಳಿತವನ್ನು ಉಲ್ಲಂಘಿಸುವವರನ್ನು ಸಹಿಸಲಾಗದು" ಎಂದು ಅವರು ಹೇಳಿದರು. ಮುಂದುವರೆದು,ಸಮಾನತೆ ಮತ್ತು ಶ್ರೇಣೀಕರಣದ ನಡುವಿನ ದೊಡ್ಡ ಸೈದ್ಧಾಂತಿಕ ಹೋರಾಟಕ್ಕೆ ಸಿದ್ಧರಾಗುವಂತೆ ಅವರು ವಕೀಲರು ಮತ್ತು ನಾಗರಿಕರಿಗೆ ಕರೆ ನೀಡಿದರು.
ಇದೇ ವೇಳೆ ಅವರು ಸಿಜೆಐ ಬಿ ಆರ್ ಗವಾಯಿ ಅವರ ಮೇಲೆ ಶೂ ತೂರಿದ ಘಟನೆಯ ಬಗ್ಗೆಯೂ ಪ್ರಸ್ತಾಪಿಸಿದರು. "ಸಿಜೆಐ ಅವರು ಕಲಾಪ ನಡೆಸುವ ವೇಳೆಯೇ ಅಂತಹ ಘಟನೆ ನಡೆದರೂ ನಾವು ಸುಮ್ಮನಿದ್ದರೆ, ಸಂಸ್ಥೆಯೆಡೆಗಿನ (ಸರ್ವೋಚ್ಚ ನ್ಯಾಯಾಲಯ) ನಮ್ಮ ಗೌರವದ ಬಗ್ಗೆ ಅದು ಏನು ಸಂದೇಶ ನೀಡುತ್ತದೆ?" ಎಂದು ನ್ಯಾ. ಚಂದ್ರು ಪ್ರಶ್ನಿಸಿದರು. ಇಂತಹ ಘಟನೆಯೊಂದು ಹಾಲಿ ಸಿಜೆಐ ಅವರು ವಿರುದ್ಧ ನಡೆದಾಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಬೇಕಿತ್ತೇ ಹೊರತು ಮೌನವಲ್ಲ ಎಂದು ಅವರು ಹೇಳಿದರು.
ಮುಂದುವರೆದು ಮೇಲ್ಜಾತಿಗಳು ಹಾಗೂ ಕೆಳಜಾತಿಗಳು ಚಪ್ಪಲಿಯನ್ನು ಗ್ರಹಿಸುವಲ್ಲಿ ಹೊಂದಿರುವ ಭಿನ್ನತೆಯ ಬಗ್ಗೆಯೂ ಅವರು ಗಮನಸೆಳೆದರು. ಮೇಲ್ಜಾತಿಗಳು ಚಪ್ಪಲಿಯನ್ನು ಅವಮಾನಿಸುವ ವಸ್ತುವಾಗಿ ಕಂಡರೆ, ಕೆಳ ಜಾತಿಗಳು ಅದನ್ನು ಕೀಳಾಗಿ ಕಾಣದೆ ಅದನ್ನು ಧರಿಸುವುದರ ಜೊತೆಗೆ ಅದರೊಂದಿಗೆ ಒಡನಾಟವನ್ನೂ ಹೊಂದಿರುತ್ತಾರೆ ಎಂದರು.
ಒಮ್ಮೆ ಪೆರಿಯಾರ್ ಅವರಿಗೆ ಚಪ್ಪಲಿಯನ್ನು ಎಸೆದಾಗ ಅವರು ಅದನ್ನು ಕೈಯಲ್ಲಿ ಹಿಡಿದು ತಾನು ಇನ್ನೊಂದು ಜೊತೆ ಚಪ್ಪಲಿ ಧರಿಸುವುದಾಗಿ ಹೇಳಿದ್ದರು ಎಂದು ನ್ಯಾ. ಚಂದ್ರು ನೆನೆದರು. ಚಪ್ಪಲಿ ಎನ್ನುವುದು ಸಮಾನತೆ ಮತ್ತು ಸಂಘರ್ಷವನ್ನು ಪ್ರತಿನಿಧಿಸುತ್ತದೆಯೇ ವಿನಾ ಅವಮಾನವನ್ನಲ್ಲ ಎಂದು ಅವರು ಅಭಿಪ್ರಾಯಪಟ್ಟರು.