ಸುದ್ದಿಗಳು

ರಾಜಕಾರಣಿಗಳಿಗೆ ನಡುಕು ಹುಟ್ಟಿಸಿದ್ದ ನ್ಯಾ. ಹುದ್ದಾರ್: ವಿವೇಕ್‌ ಸುಬ್ಬಾರೆಡ್ಡಿ ಬಣ್ಣನೆ

ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ನ್ಯಾ. ಹುದ್ದಾರ್‌ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. 

Bar & Bench

“ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ಕಾರ್ಯ ವೈಖರಿ ವಿಚಾರಣೆಗೆ ಎದುರಾಗುವ ರಾಜಕಾರಣಿಗಳಿಗೆ ನಡುಕು ಹುಟ್ಟಿಸುತ್ತಿತ್ತು. ಇವರೊಬ್ಬ ಅಪ್ಪಟ ಸಾರ್ವಜನಿಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ” ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಬಣ್ಣಿಸಿದರು.

ಹೈಕೋರ್ಟ್‌ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರು ಮಂಗಳವಾರ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ (ಎಎಬಿ) ವತಿಯಿಂದ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ಸನ್ಮಾನಿಸಿ ಅವರನ್ನು ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ ರೆಡ್ಡಿ ಅವರು “ಕಾನೂನು ಎಂಬುದು ತರ್ಕವಲ್ಲ. ಅದೊಂದು ಅನುಭವ ಎಂಬುದನ್ನು ತಮ್ಮ ಮೂರು ದಶಕಗಳಿಗೂ ಹೆಚ್ಚಿನ ಸೇವಾವಧಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ರಾಮಚಂದ್ರ ಹುದ್ದಾರ ಅವರು ತೋರಿಸಿಕೊಟ್ಟಿದ್ದಾರೆ. ಇದು ಕಿರಿಯರಿಗೆ ಮಾರ್ಗದರ್ಶಕ” ಎಂದರು.

ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರು “ರಾಮಚಂದ್ರ ಹುದ್ದಾರ ಅವರು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಆಗಿ, ಅಕಾಡೆಮಿ ಅಧ್ಯಕ್ಷರಾಗಿ, ಜಿಲ್ಲಾ ನ್ಯಾಯಾಧೀಶರಾಗಿ ಸಲ್ಲಿಸಿರುವ ತಾಳ್ಮೆಯ ಮತ್ತು ಯಶಸ್ಸು ಭರಿತ ಸೇವೆ ಸದಾ ಮಾದರಿಯಾಗಿದೆ” ಎಂದರು.

ಸಂಘದ ಪದಾಧಿಕಾರಿಗಳಾದ ಎಸ್‌ ರಾಜು, ಸಂಧ್ಯಾ ಪ್ರಭು, ಹೆಚ್ಚುವರಿ ಸಾಲಿಸಿಟರ್‌ ಜನರಲ್ ಅರವಿಂದ ಕಾಮತ್‌, ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ಎಎಬಿ ಅಧ್ಯಕ್ಷ ವಿವೇಕ್ ರೆಡ್ಡಿ, ಬಿ ಆರ್ ಹರಿಣಿ, ಖಜಾಂಚಿ ಶ್ವೇತಾ ರವಿಶಂಕರ್, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಜಯಂತ್‌ ಬ್ಯಾನರ್ಜಿ, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ, ಚಂದ್ರಕಾಂತ ಪಾಟೀಲ ಮತ್ತು ವೀಣಾ ರಾವ್‌ ಇದ್ದರು.

ಇದಕ್ಕೂ ಮುನ್ನ, ಕೋರ್ಟ್‌ 1ರಲ್ಲಿ ನಡೆದ ಸಮಾರಂಭದಲ್ಲಿ ನ್ಯಾ. ಹುದ್ದಾರ್‌ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.