Justice Manmohan being sworn in as Supreme Court judge 
ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮನಮೋಹನ್ ಪ್ರಮಾಣವಚನ

ಇದರೊಂದಿಗೆ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸುಪ್ರೀಂ ಕೋರ್ಟ್‌ನಲ್ಲಿ 33 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು ಒಂದು ಹುದ್ದೆ ಮಾತ್ರ ಖಾಲಿ ಇದೆ.

Bar & Bench

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಅವರು ಗುರುವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಜೆಐ ಸಂಜೀವ್‌ ಖನ್ನಾ ಅವರು ನ್ಯಾ. ಮನಮೋಹನ್‌ ಅವರಿಗೆ ಗೌಪ್ಯತಾ ವಿಧಿ ಬೋಧಿಸಿದರು.

ನ್ಯಾ. ಮನಮೋಹನ್ ಅವರನ್ನು  ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನವೆಂಬರ್ 28 ರಂದು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಡಿಸೆಂಬರ್ 3ರಂದು ಶಿಫಾರಸನ್ನು ಅಂಗೀಕರಿಸಿತ್ತು.

ಸೆಪ್ಟೆಂಬರ್ 2024 ರಿಂದ ನ್ಯಾ. ಮನಮೋಹನ್‌ ಅವರು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಅಂದರೆ ಸೆಪ್ಟೆಂಬರ್ 2023ರಿಂದ ಅವರು ಅದೇ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ನ್ಯಾ. ಮನಮೋಹನ್‌ ಅವರು ಡಿಸೆಂಬರ್ 17, 1962ರಂದು ಜನಿಸಿದ್ದು, ದೆಹಲಿಯ ಕ್ಯಾಂಪಸ್ ಕಾನೂನು ಕೇಂದ್ರದಿಂದ 1987ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಅದೇ ವರ್ಷ ದೆಹಲಿ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ಸೇರ್ಪಡೆಗೊಂಡರು. ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡಿದ್ದಾರೆ.

ಜನವರಿ 2003ರಲ್ಲಿ ದೆಹಲಿ ಹೈಕೋರ್ಟ್‌ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡ ಅವರು 13 ಮಾರ್ಚ್ 2008ರಂದು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು, 17 ಡಿಸೆಂಬರ್ 2009ರಂದು ಕಾಯಂಗೊಂಡರು.

ಮನಮೋಹನ್ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಸುವುದರೊಂದಿಗೆ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸುಪ್ರೀಂ ಕೋರ್ಟ್‌ನಲ್ಲಿ 33 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು ಒಂದು ಹುದ್ದೆ ಮಾತ್ರ ಖಾಲಿ ಇದೆ.