ತಮ್ಮ ವೃತ್ತಿಯ ಹೊರತಾಗಿ ವಕೀಲರು ಮತ್ತು ನ್ಯಾಯಮೂರ್ತಿಗಳು ಸಮಯ ವ್ಯಯಿಸುವುದು ತೀರ ಕಡಿಮೆ. ಆದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರು ನಿರೀಕ್ಷಿಸದ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು ಎಂಬ ವಿಚಾರ ಅವರಿಗೆ ಶುಕ್ರವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಹಿರಂಗವಾಯಿತು.
ನ್ಯಾಯಮೂರ್ತಿ ನಾಗೇಶ್ವರ ರಾವ್ ಅವರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಹಲವು ಪಾತ್ರಗಳಿಗೆ ಬಣ್ಣ ಹಚ್ಚಿದ್ದರು ಎಂಬ ವಿಚಾರವನ್ನು ಹಿರಿಯ ವಕೀಲ ಪ್ರದೀಪ್ ರೈ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ಬಹಿರಂಗಪಡಿಸಿದರು.
“ನ್ಯಾ. ರಾವ್ ಅವರು ಬಹುಮುಖ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಉತ್ತಮ ಕ್ರಿಕೆಟರ್ ಮಾತ್ರವಲ್ಲ, ಹಲವು ಸಿನಿಮಾಗಳಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರ ನಿಭಾಯಿಸಿದ್ದಾರೆ. ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದರು. “ಕಾನೂನ್ ಅಪ್ನಾ ಅಪ್ನಾ” ಸಿನಿಮಾದಲ್ಲಿ ನ್ಯಾ. ರಾವ್ ಅವರು ಬಾಲಿವುಡ್ ನಟ ಸಂಜಯ್ ದತ್ ಜೊತೆ ನಟಿಸಿದ್ದರು” ಎಂದರು.
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸುಪ್ರೀಂ ಕೋರ್ಟ್ ವಕೀಲರ ಪರಿಷತ್ ಅಧ್ಯಕ್ಷ ವಿಕಾಸ್ ಸಿಂಗ್ ಅವರು ನ್ಯಾ. ರಾವ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜೂನ್ 7ರಂದು ನ್ಯಾ. ರಾವ್ ನಿವೃತ್ತರಾಗಲಿದ್ದು, ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜೆ ಇರಲಿದೆ. ಹೀಗಾಗಿ, ಇಂದೇ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರಾಗಲಿರುವ ನ್ಯಾ. ರಾವ್: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಲಿರುವ ನ್ಯಾ. ರಾವ್ ಅವರು ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರಾಗಲಿದ್ದು, ನಮ್ಮ ಜೊತೆ ಸಂವಹನ ಮುಂದುವರಿಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದರು.