ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಪಿ ಬಿ ವರಾಳೆ

Bar & Bench

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವರಾಳೆ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌, ಬಿ ವೀರಪ್ಪ, ಆರ್‌ ದೇವದಾಸ್‌, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ, ನ್ಯಾಯಾಂಗದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ತಿಂಗಳು ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರಾಳೆ ಅವರ ಪದೋನ್ನತಿಗೆ ಶಿಫಾರಸು ಮಾಡಿತ್ತು.

ನ್ಯಾಯಮೂರ್ತಿ ವರಾಳೆ ಅವರು ಆಗಸ್ಟ್ 1985ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ವೃತ್ತಿ ಜೀವನ ಆರಂಭಿಸಿದರು. ವಕೀಲರಾದ ಎಸ್ ಎನ್ ಲೋಯಾ ಅವರ ಬಳಿ ಆರಂಭದಲ್ಲಿ ವರಾಳೆ ಪ್ರಾಕ್ಟೀಸ್‌ ಮಾಡಿದ್ದರು. 1992ರವರೆಗೆ ಔರಂಗಾಬಾದ್‌ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಜುಲೈ 18, 2008 ರಂದು ನೇಮಕಗೊಂಡಿದ್ದರು.