Justice Revati Mohite Dere and Bombay High Court 
ಸುದ್ದಿಗಳು

[ಮಾಲೇಗಾಂವ್‌ ಸ್ಫೋಟ] ಎನ್‌ಐಎ ವಕೀಲರಾಗಿ ವಾದಿಸಿರುವುದನ್ನು ಉಲ್ಲೇಖಿಸಿದ ಆರೋಪಿ: ವಿಚಾರಣೆಯಿಂದ ಹಿಂಸರಿದ ನ್ಯಾ.ರೇವತಿ

ನ್ಯಾ. ರೇವತಿ ಅವರು ಪ್ರಕರಣದ ವಿಚಾರಣೆ ನಡೆಸಲು ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಎನ್‌ಐಎ ಪರ ವಕೀಲ ಸಂದೇಶ್‌ ಪಾಟೀಲ್‌ ಹೇಳಿದರು. ಆದರೆ, ನ್ಯಾ. ರೇವತಿ ಅವರು ಪ್ರಕರಣದ ಹಿಂದೆ ಸರಿಯುವುದು ಸೂಕ್ತ ಎಂದು ಹಿಂಸರಿದರು.

Bar & Bench

ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಅವರು ನ್ಯಾಯಮೂರ್ತಿ ಹುದ್ದೆಗೆ ಸೇರುವುದಕ್ಕೂ ಮುನ್ನ ಮಾಲೆಗಾಂವೆ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ವಕೀಲರಾಗಿ ಪ್ರತಿನಿಧಿಸಿದ್ದರು ಎಂದು ಆರೋಪಿಯೊಬ್ಬರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ನ್ಯಾ. ರೇವತಿ ಅವರು ಮಾಲೆಗಾಂವ್‌ ಸ್ಫೋಟ ಪ್ರಕರಣಗಳ ವಿಚಾರಣೆಯಿಂದದ ಶುಕ್ರವಾರ ಹಿಂದೆ ಸರಿದರು.

ಪ್ರಾಸಿಕ್ಯೂಷನ್‌ ಪಟ್ಟಿಯಲ್ಲಿ ಇಲ್ಲದ ಸಾಕ್ಷಿಯ ವಿಚಾರಣೆಗೆ ಅನುಮತಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಮೀರ್‌ ಕುಲಕರ್ಣಿ ಎಂಬ ಆರೋಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಶರ್ಮಿಳಾ ದೇಶಮುಖ್‌ ಮತ್ತು ರೇವತಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ಈ ವೇಳೆ ಆರೋಪಿ ಪರ ವಕೀಲರು ಮೇಲಿನ ಮಾಹಿತಿಯನ್ನು ಪೀಠದ ಮುಂದೆ ಉಲ್ಲೇಖಿಸಿದರು.

2011ರಲ್ಲಿ ಆರೋಪಿಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾಗ ಹಾಲಿ ನ್ಯಾ. ರೇವತಿ ಅವರು ಎನ್‌ಐಎ ಪ್ರತಿನಿಧಿಸಿದ್ದರು ಎಂದು ಆರೋಪಿ ಪರ ವಕೀಲರು ಈ ಸಂಬಂಧ ನ್ಯಾಯಾಲಯದ ಆದೇಶ ತೋರಿಸಿದರು. ಇತ್ತೀಚೆಗಷ್ಟೇ ಈ ಆದೇಶ ತಮ್ಮ ಗಮನಕ್ಕೆ ಬಂದಿದ್ದರಿಂದ ಪೀಠದ ಗಮನಕ್ಕೆ ತರುವುದು ತಡವಾಯಿತು ಎಂದು ಕ್ಷಮೆ ಕೋರಿದರು.

ನ್ಯಾ. ರೇವತಿ ಅವರು ವಿಚಾರಣೆ ನಡೆಸುವುದಕ್ಕೆ ತಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ಎನ್‌ಐಎ ಪ್ರತಿನಿಧಿಸಿದ್ದ ವಕೀಲ ಸಂದೇಶ್‌ ಪಾಟೀಲ್‌ ಅವರು ಹೇಳಿದರು. ಆದರೆ, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದು ಸೂಕ್ತ ಎಂದು ನಿರ್ಧರಿಸಿ ನ್ಯಾ. ರೇವತಿ ಅವರು ಹಿಂದೆ ಸರಿದರು.

ನ್ಯಾಯಮೂರ್ತಿಗಳಾದ ಶರ್ಮಿಳಾ ದೇಶಮುಖ್‌ ಮತ್ತು ರೇವತಿ ಅವರನ್ನು ಒಳಗೊಂಡ ಪೀಠವು ಇದುವರೆಗೆ ಏಳು ವಿಚಾರಣೆ ನಡೆಸಿದೆ. ಕಳೆದ ವಿಚಾರಣೆಯಲ್ಲಿ ಪೀಠವು ಅಧೀನ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ವಿಶೇಷ ನ್ಯಾಯಾಲಯವು ಪ್ರತಿ ಹದಿನೈದು ದಿನಕ್ಕೊಮ್ಮೆ ವಿಚಾರಣೆಯ ಪ್ರಗತಿ ಕುರಿತು ವರದಿ ಸಲ್ಲಿಸಬೇಕು ಎಂದು ಕಳೆದ ತಿಂಗಳು ವಿಭಾಗೀಯ ಪೀಠ ಆದೇಶಿಸಿತ್ತು.

2008ರಲ್ಲಿ ಮಾಲೆಗಾಂವ್‌ನಲ್ಲಿ ಬೈಕ್‌ನಲ್ಲಿ ಇರಿಸಲಾಗಿದ್ದ ಬಾಂಬ್‌ ಸ್ಫೋಟಗೊಂಡು 40 ಮಂದಿ ಸಾವಿಗೀಡಾಗಿದ್ದು, 100 ಮಂದಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಮತ್ತು ಲೆಫ್ಟಿನೆಂಟ್‌ ಕರ್ನಲ್‌ ಪರೋಹಿತ್‌ ಸಹ ಆರೋಪಿಗಳಾಗಿದ್ದಾರೆ.