ದೇಶದಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕೊಲಿಜಿಯಂಗೆ ಪರ್ಯಾಯವಾದ ವ್ಯವಸ್ಥೆಯೊಂದು ರೂಪುಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಪ್ರಸ್ತಾಪಿಸಿದ್ದಾರೆ.
ಈ ಸಂಬಂಧ 1980ರಲ್ಲಿ ನ್ಯಾ. ಎಚ್ ಆರ್ ಖನ್ನಾ ಅವರು ಕಾನೂನು ಸಚಿವರಿಗೆ ಬರೆದ ಪತ್ರ ಆಧರಿಸಿದ, ನ್ಯಾ. ನಾರಿಮನ್ ಅವರು ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಸ್ಥಾಪಿಸಬೇಕು. ಈ ಸಮಿತಿ ನ್ಯಾಯಾಂಗದ ಸ್ವಾತಂತ್ರ್ಯದ ಹಿತಾಸಕ್ತಿಗಳನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ತಮಿಳುನಾಡಿನ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಪ್ರಸಿದ್ಧ ವಕೀಲ ಎಸ್ ಗೋವಿಂದನ್ ಅವರ ಸ್ಮರಣಾರ್ಥ ದ ಜ್ಯೂನಿಯರ್ಸ್ ಆಫ್ ಮಿಸ್ಟರ್ ಎಸ್ ಗೋವಿಂದನ್ ಸಂಘಟನೆ ಕಳೆದ ಭಾನುವಾರ ಚೆನ್ನೈನಲ್ಲಿ ಆಯೋಜಿಸಿದ್ದ ವಕೀಲ ವೃತ್ತಿಯಲ್ಲಿ ನೈತಿಕತೆಗಾಗಿ ಎಸ್‌ಜಿಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾ. ಅಕಿಲ್ ಕುರೇಶಿ ಅವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈಗಿನ ಕೊಲಿಜಿಯಂ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ತುಲನೆಯಾದರೂ ಅಂತರ್ಗತ ನ್ಯೂನತೆಗಳನ್ನು ಹೊಂದಿದೆ ಎಂಬ ನ್ಯಾ. ಕುರೇಶಿ ಅವರ ಮಾತನ್ನು ನ್ಯಾ. ನಾರಿಮನ್ ಸಮರ್ಥಿಸಿಕೊಂಡರು.
ಕೊಲಿಜಿಯಂ ವ್ಯವಸ್ಥೆಯನ್ನು ಉತ್ತಮ ಹಾಗೂ ಪಾರದರ್ಶಕಗೊಳಿಸಬೇಕಿದೆ. ಕಾರ್ಯಾಂಗವನ್ನು ನೇಮಿಸುವುದಕ್ಕಿಂತಲೂ ಇದು ಖಂಡಿತಾ ಉತ್ತಮವಾದುದು ಎಂದು ಅವರು ಕಿವಿಮಾತು ಹೇಳಿದರು.
ಈ ಸಮಿತಿಗೆ ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧತೆ ಇರುವ ನಿವೃತ್ತ ನ್ಯಾಯಮೂರ್ತಿಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ವಕೀಲರ ಪರಿಷತ್ತಿನ ಕಾರ್ಯನಿರತ ವಕೀಲರು ಹೆಸರುಗಳನ್ನು ಶಿಫಾರಸ್ಸು ಮಾಡಬೇಕು. ಒಂದೊಂದು ಹೈಕೋರ್ಟ್ ವಕೀಲರ ಪರಿಷತ್ತಿನಿಂದ 2 ಹಾಗೂ ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತಿನಿಂದ 20 ಹೆಸರುಗಳನ್ನು ಸೂಚಿಸಬೇಕು. ಇದನ್ನು ತಮ್ಮ ಮುಂದಿರಿಸಿಕೊಂಡು ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣಪೀಠವು ಸಮಿತಿಯನ್ನು ರಚಿಸಬೇಕು" ಎಂದು ಅವರು ಕೊಲಿಜಿಯಂಗೆ ಪರ್ಯಾಯವಾದ ಸಮಿತಿಯನ್ನು ರೂಪಿಸುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.