ನ್ಯಾಯಮೂರ್ತಿ ರೋಹಿಂಟನ್ ನಾರಿಮನ್
ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ 
ಸುದ್ದಿಗಳು

ನಿವೃತ್ತ ನ್ಯಾಯಮೂರ್ತಿಗಳಿರುವ ಕೊಲಿಜಿಯಂ ರಚನೆಗೆ ನ್ಯಾ. ರೋಹಿಂಟನ್ ನಾರಿಮನ್ ಸಲಹೆ

Bar & Bench

ಪ್ರಸ್ತುತ ಕೊಲಿಜಿಯಂ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕಾಗಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನೇಮಕಾತಿ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿಗಳು ನೇರವಾಗಿ ಭಾಗಿಯಾಗಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಸಲಹೆ ನೀಡಿದ್ದಾರೆ.

ಮುಂಬೈನ ಏಷ್ಯಾಟಿಕ್‌ ಸೊಸೈಟಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ಬನ್ಸಾರಿ ಸೇಠ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಭಾರತದ ಸಂವಿಧಾನ: ತಡೆ ಮತ್ತು ಸಮತೋಲನ" ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಕೊಲಿಜಿಯಂ ವ್ಯವಸ್ಥೆ ತನ್ನದೇ ಆದ ನ್ಯೂನತೆಗಳಿಂದ ಕೂಡಿದೆ ಎಂಬುದನ್ನು ಅವರು ಒಪ್ಪಿದಾರಾದರೂ ಪ್ರಸ್ತುತ ಅದಕ್ಕಿಂತ ಉತ್ತಮ ಪರ್ಯಾಯವಿಲ್ಲ ಎಂದು ಅಭಿಪ್ರಾಯಪಟ್ಟರು.

"ನಮ್ಮಲ್ಲಿರುವ ಕೊಲಿಜಿಯಂ ವ್ಯವಸ್ಥೆ ಕೆಟ್ಟದಾಗಿದೆ ಆದರೆ ಅದಕ್ಕಿಂತ ಉತ್ತಮವಾದುದು ಸದ್ಯಕ್ಕೆ ಬೇರೆ ಯಾವುದೂ ಇಲ್ಲ. ಸುದೀರ್ಘ ಭವಿಷ್ಯದ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಕೊಲಿಜಿಯಂ ರೂಪುಗೊಳ್ಳಬೇಕು ಎಂದು ಸೂಚಿಸುವೆ" ಎಂಬುದಾಗಿ ಅವರು ತಿಳಿಸಿದರು.

ಕೊಲಿಜಿಯಂಗೆ ಯಾವ ನಿವೃತ್ತ ನ್ಯಾಯಮೂರ್ತಿಗಳು ಆಯ್ಕೆಯಾಗಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ವಕೀಲರು ಆಯ್ಕೆ ಮಾಡಬಹುದು ಎಂದು ಅವರು ಸಲಹೆ ನೀಡಿದರು.

"ವಕೀಲ ಸಮುದಾಯದಲ್ಲಿರುವವರೇ ನಮ್ಮ (ನ್ಯಾಯಮೂರ್ತಿಗಳ) ನ್ಯಾಯಾಧೀಶರಾಗಿದ್ದು ಪ್ರಾಕ್ಟೀಸ್‌ ಮಾಡುವ ನ್ಯಾಯವಾದಿಗಳು ಸದಾ ನಮ್ಮನ್ನು ನಿರ್ಣಯಿಸುತ್ತಾ ಇರುತ್ತಾರೆ. ಕಾರ್ಯಾಂಗದೊಂದಿಗೆ ಸಮಾಲೋಚಿಸಿ, ಎಲ್ಲರೊಂದಿಗೂ ಚರ್ಚಿಸಿ ನಂತರ ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡುವ ಮುಕ್ತತೆಗೆ ಹೆಸರುವಾಸಿಯಾದ ನಿವೃತ್ತ ನ್ಯಾಯಮೂರ್ತಿಗಳ ಪರವಾಗಿ ಮತ ಚಲಾಯಿಸುವ ವಕೀಲರನ್ನು ಹೊಂದುವುದು ಮುಖ್ಯ" ಎಂದು ಅವರು ನುಡಿದರು.

ನಮ್ಮಲ್ಲಿರುವ ಕೊಲಿಜಿಯಂ ವ್ಯವಸ್ಥೆ ಕೆಟ್ಟದಾಗಿದೆ ಆದರೆ ಅದಕ್ಕಿಂತ ಉತ್ತಮವಾದುದು ಸದ್ಯಕ್ಕೆ ಬೇರೆ ಯಾವುದೂ ಇಲ್ಲ. ಸುದೀರ್ಘ ಭವಿಷ್ಯದ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಕೊಲಿಜಿಯಂ ರೂಪುಗೊಳ್ಳಬೇಕು ಎಂದು ಸೂಚಿಸುವೆ.
ನ್ಯಾ. ರೋಹಿಂಟನ್ ನಾರಿಮನ್

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿನ ಪ್ರಸ್ತುತ ನ್ಯಾಯಮೂರ್ತಿಗಳ ಗುಂಪಿನಲ್ಲಿ ಅತ್ಯುತ್ತಮವಾದವರು ಇದ್ದಾರೆ. ಆದರೆ ಚಂಚಲ ಮತ್ತು ಹೆಚ್ಚು ಕಾರ್ಯಾಂಗ ಮನೋಭಾವದ ನ್ಯಾಯಮೂರ್ತಿಗಳೂ ಕೆಲವರಿದ್ದಾರೆ. ಕೊಲಿಜಿಯಂ ವ್ಯವಸ್ಥೆಯನ್ನು ಪರಿಷ್ಕರಿಸುವುದರಿಂದ ಇಂತಹವರ ಸಂಖ್ಯೆ ಕಡಿಮೆಯಾಗಬಹುದು ಎಂದು ಅವರು ವಿವರಿಸಿದರು.

ಅಂತರರಾಷ್ಟ್ರೀಯ ಸುದ್ದಿವಾಹಿನಿ ಬಿಬಿಸಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಪ್ರಸ್ತಾಪಿಸಿದ ಅವರು ಅಂತಹ ದಾಳಿಗಳಿಂದ ಮಾಧ್ಯಮಗಳನ್ನು ರಕ್ಷಿಸುವಂತೆ ನ್ಯಾಯಾಲಯಗಳನ್ನು ಒತ್ತಾಯಿಸಿದರು.

[ಉಪನ್ಯಾಸದ ದೃಶ್ಯಾವಳಿಗಳನ್ನು ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ]