ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ವರ್ಷಗಳಿಗೂ ಅಧಿಕಾಲ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಇಂದು ಸೇವೆಯಿಂದ ನಿವೃತ್ತರಾದರು.
ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ) ವತಿಯಿಂದ ಆಯೋಜಿಸಿದ್ದ ಔಪಚಾರಿಕ ವಿದಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿಯೇ ಅಪರೂಪ ಎನ್ನುವಂತೆ ಮೊದಲ ಬಾರಿಗೆ ನ್ಯಾಯಮೂರ್ತಿಗಳ ವಿದಾಯದ ಸಂದರ್ಭದ ವೇಳೆ ಔಪಚಾರಿಕ ಪೀಠದಲ್ಲಿಯಾಗಲಿ ಅಥವಾ ಎಸ್‌ಸಿಬಿಎ ಆಯೋಜಿಸಿದ್ದ ವಿದಾಯ ಕಾರ್ಯಕ್ರಮದಲ್ಲಿ ಸಿಜೆಐ ಇದೇ ಮೊದಲ ಬಾರಿಗೆ ಭಾಗಿಯಾಗಿರಲಿಲ್ಲ. ಸದ್ಯ ಸಿಜೆಐ ಡಿ ವೈ ಚಂದ್ರಚೂಡ್ ಅವರು ಅಮೆರಿಕದಲ್ಲಿದ್ದಾರೆ.
ವಿದಾಯ ದಿನದ ಹಿನ್ನೆಲೆಯಲ್ಲಿ ನ್ಯಾ. ಕೌಲ್ ಅವರೊಂದಿಗೆ ಎರಡನೇ ಕೋರ್ಟ್‌ನಲ್ಲಿ ಔಪಚಾರಿಕ ಪೀಠದಲ್ಲಿ ಕುಳಿತು ವಿಚಾರಣೆಯಲ್ಲಿ ನ್ಯಾ. ಭಟ್ ಭಾಗಿಯಾದರು. “ಇಂಥ ಮಹತ್ವದ ಕೋರ್ಟ್‌ನಲ್ಲಿರಲು ಹೆಮ್ಮೆಯಾಗುತ್ತದೆ. ಇಲ್ಲಿ ನಾನು ಎಚ್ ಆರ್ ಖನ್ನಾ ಅವರ ಭಾವಚಿತ್ರವನ್ನು ನೋಡುತ್ತಿದ್ದೇನೆ. ನ್ಯಾ. ಕೌಲ್ ಅವರು ನನ್ನನ್ನು 41 ವರ್ಷದಿಂದ ಹಾಗೂ 16 ವರ್ಷದಿಂದ ನ್ಯಾಯಮೂರ್ತಿಯಾಗಿ ಬಲ್ಲೆ ಎಂದು ಹೇಳಿದ್ದಾರೆ. ನಿವೃತ್ತಿಯಾಗಲು ಇದಕ್ಕಿಂತ ಮತ್ತೊಂದು ಉತ್ತಮ ಸಂದರ್ಭವನ್ನು ನಾನು ಎಣಿಸಿರಲಿಲ್ಲ. ನನ್ನ ಹಿರಿಯ ವಕೀಲರಿಗೆ ಸಹಾಯ ಮಾಡಲು 1982ರಲ್ಲಿ ಈ ಘನ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಓಡಾಡಿದ್ದೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲನಾಗಿ 22 ವರ್ಷ ಕೆಲಸ ಮಾಡಿದ್ದೇನೆ” ಎಂದು ನೆನೆದರು.
“ಈ ಪೀಠದ ಸದಸ್ಯನಾಗಿ ನನ್ನ ವೃತ್ತಿ ಬದುಕು ಅಂತ್ಯಗೊಳಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಸಿಜೆಐ, ನ್ಯಾಯಮೂರ್ತಿಗಳಾದ ಕೌಲ್, ನಾನು ಮತ್ತು ಹೃಷಿಕೇಶ್ ರಾಯ್ ಅವರು ಒಂದೇ ಬ್ಯಾಚಿನ ಸಹಪಾಠಿಗಳಾಗಿದ್ದೆವು ಎನ್ನುವುದು ಸಂತಸದ ವಿಚಾರ. ನ್ಯಾ. ಕೆ ವಿ ವಿಶ್ವನಾಥನ್ ಮತ್ತು ನಾನು ಹಿರಿಯ ವಕೀಲ ಸಿ ವೈದ್ಯನಾಥನ್ ಅವರ ಚೇಂಬರ್‌ನಲ್ಲಿ ಸಹೋದ್ಯೋಗಿಗಳಾಗಿದ್ದೆವು” ಎಂದು ವಿವರಿಸಿದರು.
2019ರ ಮೇನಲ್ಲಿ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಗೊಂಡಿದ್ದ ನ್ಯಾ. ಭಟ್ ಅವರು 2019ರ ಸೆಪ್ಟೆಂಬರ್ 23ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.