Justice Sanjiv Khanna 
ಸುದ್ದಿಗಳು

ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಅಧಿಕಾರ ಸ್ವೀಕಾರ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ. ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

Bar & Bench

ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸಂಜೀವ್ ಖನ್ನಾ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ. ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಿ 183 ದಿನಗಳ ಕಾಲ (ಸುಮಾರು ಆರು ತಿಂಗಳು) ಸೇವೆ ಸಲ್ಲಿಸಲಿದ್ದಾರೆ. ಅವರು 2025ರ ಮೇ 13ರಂದು ನಿವೃತ್ತರಾಗಲಿದ್ದಾರೆ.

ತೆರಿಗೆ, ಸಾಂವಿಧಾನಿಕ ಕಾನೂನು, ಮಧ್ಯಸ್ಥಿಕೆ, ವಾಣಿಜ್ಯ, ಪರಿಸರ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪರಿಣತರಾಗಿರುವ ನ್ಯಾ. ಖನ್ನಾ ಅವರು 1983ರಲ್ಲಿ ವಕೀಲಿಕೆ ಆರಂಬಿಸಿದರು.    

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) 2004ರಲ್ಲಿ ಅವರು ನೇಮಕಗೊಂಡರು. 2005ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಾರ್ಯಾರಂಭ ಮಾಡಿದ ಅವರು ಒಂದು ವರ್ಷದ ನಂತರ ಖಾಯಂ ನ್ಯಾಯಮೂರ್ತಿಯಾದರು.

ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದದ್ದು ಜನವರಿ 18, 2019 ರಂದು. ತಾನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದದ್ದೇ ದೊಡ್ಡ ಅಚ್ಚರಿಯ ಸಂಗತಿ ಎಂದು ಅವರು ಆಗ ಹೇಳಿದ್ದರು.

ನ್ಯಾಯಮೂರ್ತಿ ಖನ್ನಾ ಅವರು ಮಾಜಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಡಿಎಂ ಜಬಲ್ಪುರ್‌ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದ ಹನ್ಸರಾಜ್ ಖನ್ನಾ ಅವರ ಸೋದರಳಿಯರಾಗಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ನ್ಯಾ. ಖನ್ನಾ ಅವರು ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿಹಿಡಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದರು.  ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ ನೀಡಲು ಅವಕಾಶ ಕಲ್ಪಿಸುವ ಚುನಾವಣಾ ಬಾಂಡ್ ಯೋಜನೆ ರದ್ದುಪಡಿಸಿದ ಸಾಂವಿಧಾನಿಕ ಪೀಠದಲ್ಲಿ ಅವರು ಸದಸ್ಯರಾಗಿದ್ದರು.

ಚುನಾವಣಾ ಸಂದರ್ಭದಲ್ಲಿ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ತಾಳೆ ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಕಳೆದ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿರಸ್ಕರಿಸಿತ್ತು.

ಲೋಕಸಭೆ ಚುನಾವಣೆಗೆ ಮುನ್ನ, ಮಾಜಿ ಅಧಿಕಾರಿ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖಬೀರ್ ಸಿಂಗ್ ಸಂಧು ಅವರನ್ನು ಹೊಸ ಚುನಾವಣಾ ಆಯುಕ್ತರನ್ನಾಗಿ ನೇಮಿಸುವುದನ್ನು ತಡೆಯಲು ನ್ಯಾಯಮೂರ್ತಿ ಖನ್ನಾ ನೇತೃತ್ವದ ಪೀಠ ನಿರಾಕರಿಸಿತ್ತು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್  ಅವರಿಗೆ ನ್ಯಾಯಮೂರ್ತಿ ಖನ್ನಾ ನೇತೃತ್ವದ ಪೀಠ ಜುಲೈ 12ರಂದು ಮಧ್ಯಂತರ ಜಾಮೀನು ನೀಡಿತ್ತು. ಅಲ್ಲದೆ ಇದಕ್ಕೂ ಮುನ್ನ ನ್ಯಾ. ಖನ್ನಾ ಅವರಿದ್ದ ಪೀಠ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಎಪಿ ಸಂಸದ ಸಂಜಯ್ ಸಿಂಗ್ ಅವರಿಗೂ ಜಾಮೀನು ನೀಡಿತ್ತು.

ತಮ್ಮ ಧರ್ಮವನ್ನು ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ ಮುಂತಾದ ಬಟ್ಟೆ ಧರಿಸುವುದನ್ನು ನಿರ್ಬಂಧಿಸಿದ್ದ ಮುಂಬೈನ ಕಾಲೇಜನ್ನು ಕಳೆದ ಆಗಸ್ಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿಗಳಾದ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಈ ಸಂಬಂಧ ಕಾಲೇಜು ಹೊರಡಿಸಿದ್ದ ನೋಟಿಸ್‌ಗೆ ಭಾಗಶಃ ತಡೆ ವಿಧಿಸಿತ್ತು.

ನವದೆಹಲಿಯ ಸೆಂಟ್ರಲ್‌ ವಿಸ್ತಾ ಪ್ರದೇಶದ ಮರು ಅಭಿವೃದ್ಧಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾ. ಖನ್ನಾ ಅವರು ಭಿನ್ನ ತೀರ್ಪು ನೀಡಿದ್ದರು. ಯೋಜನೆಯ ತೀರ್ಮಾನದಲ್ಲಿ ಲೋಪವಿಲ್ಲವಾದರೂ ಭೂ ಬಳಕೆಯ ಬದಲಾವಣೆ ವಿಷಯ ಬಂದಾಗ ಪಾರಂಪರಿಕ ಸಮಿತಿಯಿಂದ ಮೊದಲೇ ಅನುಮೋದನೆ ಪಡೆಯುವುದು ಅಗತ್ಯ ಎಂದು ಅವರು ಆಗ ಅಭಿಪ್ರಾಯಪಟ್ಟಿದ್ದರು.